ಕುತೂಹಲ ಕೆರಳಿಸಿದ ಕೆಸಿಆರ್​ ನಡೆ; ತೆಲಂಗಾಣ ವಿಧಾನಸಭೆ ವಿಸರ್ಜನೆಗೆ ಮುಹೂರ್ತ ಫಿಕ್ಸ್​?!

ಹೈದರಾಬಾದ್​: ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ಅವರ ಸರ್ಕಾರ ವಿಸರ್ಜನೆಯ ನಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ವಿಧಾನಸಭೆ ವಿಸರ್ಜನೆ ಕುರಿತು ನಾಳೆ ಸಿಎಂ ಕೆಸಿಆರ್​ ನಿರ್ಧಾರ ಕೈಗೊಳ್ಳಲಿದ್ದಾರೆ.

ನಾಳೆ ಬೆಳಗ್ಗೆ 6:45ಕ್ಕೆ ಕೆಸಿಆರ್​ ಸಚಿವ ಸಂಪುಟವು ಮಹತ್ವದ ಸಭೆ ನಡೆಸಲಿದ್ದು, ಆನಂತರ ವಿಧಾನಸಭೆ ವಿಸರ್ಜನೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಂದರೆ ಕೆಸಿಆರ್​ ಸರ್ಕಾರ ಇನ್ನು ಒಂದೇ ದಿನ ದಿನ ಅಸ್ತಿತ್ವದಲ್ಲಿ ಇರಲಿದ್ದು, ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿದೆ ಎನ್ನಲಾಗ್ತಿದೆ.
ಇದಕ್ಕೆ ಪೂರಕವಾಗಿ ಮತ್ತೊಂದು ಮಾಹಿತಿ ಕೇಳಿಬಂದಿದ್ದು, ತರಾತುರಿಯಲ್ಲಿ ಎಲ್ಲಾ ಪ್ರಮುಖ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ವೇಮುಲವಾಡದ ಎಂಎಲ್​ಎ ರಮೇಶ್​ ಅವರು ಮೂರು ದಿನಕ್ಕೂ ಮುನ್ನವೇ 1.56 ಕೋಟಿ ಮೊತ್ತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಅಲ್ಲದೆ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯು ಪಕ್ಷದ ಎಲ್ಲಾ ಎಂಎಲ್​ಎಗಳಿಗೆ ಅವರ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಹಣದ ಪ್ರಸ್ತಾವನೆಯನ್ನು ಸಲ್ಲಿಸುವಂತೆಯೂ ಕೇಳಿದೆ. ಎಂಎಲ್​ಎಗಳು ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದೂ ತಿಳಿದುಬಂದಿದೆ.

ಈ ಎಲ್ಲಾ ಕಾರ್ಯಗಳಿಗೂ 48 ಗಂಟೆಗಳ ಗಡುವು ನೀಡಲಾಗಿತ್ತು ಎಂದೂ ಹೇಳಲಾಗುತ್ತಿದೆ. ನಾಳೆ ಬೆಳಗ್ಗೆ 6:45ಕ್ಕೆ ಸಭೆ ನಡೆಸುವ ಸಭೆ ಬಳಿಕ ತೆಲಂಗಾಣ ಸರ್ಕಾರದ ಸಚಿವ ಸಂಪುಟ ಸದಸ್ಯರು ರಾಜ್ಯಪಾಲ ನರಸಿಂಹನ್​ ಅವರನ್ನು ಭೇಟಿಯಾಗಿ ವಿಧಾನಸಭೆ ವಿಸರ್ಜಿಸುವಂತೆ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ