ಬೆಂಗಳೂರು,ಸ.5- ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಎನ್ಸಿಸಿಯ ಜಂಟಿ ನಿರ್ದೇಶಕ ಇಂದ್ರಜಿತ್ ಘೋಷ್ವಾಲ್ ಹೇಳಿದರು.
ನಗರದ ಶಿಕ್ಷಕರ ಸದನದಲ್ಲಿ ಬೆಂಗಳೂರು ನಗರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಗು ಮಾತು ಕಲಿತಾಗ ತಾಯಿ ಮೊದಲ ಗುರು. ಬುದ್ದಿ ಬೆಳೆಯುವ ಹೊತ್ತಿಗೆ ಶಿಕ್ಷಕರುಮಕ್ಕಳ ಮೇಲೆ ಪ್ರಬಾವ ಬೀರಲಾರಂಭಿಸುತ್ತಾರೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸುವುದನ್ನು ನಮಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಯಬೇಕು.
ಮಗುವಿನ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಸಮಾಜದ ಪ್ರಭಾವ ಬಹಳ ಮುಖ್ಯ. ಅದರಲ್ಲೂ ಶಿಕ್ಷಕರ ಪ್ರಭಾವ ಅತಿ ಹೆಚ್ಚು ಪರಿಣಾಮಶಾಲಿಯಾಗಿರುತ್ತದೆ ಎಂದು ಹೇಳಿದರು.
ಮಕ್ಕಳಲ್ಲಿ ಮಾನವೀಯತೆ ಮತ್ತು ಜವಾಬ್ದಾರಿಯನ್ನು ಕಲಿಸುವುದು ಆದ್ಯಕರ್ತವ್ಯ. ಆ ಮೂಲಕ ದೇಶಕ್ಕೆ ಸತ್ಪ್ರಜೆಗಳನ್ನು ರೂಪಿಸಬೇಕಿದೆ. ಶಾಲಾ ಕಾಲೇಜು ಹಂತದಲ್ಲಿ ಮಕ್ಕಳನ್ನು ಎನ್ಸಿಸಿಗೆ ಸೇರಲು ಉತ್ತೇಜನ ನೀಡಿ. ಮುಂದಿನ ದಿನಗಳಲ್ಲಿ ಅವರು ಭಾರತೀಯ ಸೇನೆ ಸೇರಿ ದೇಶ ಸೇವೆ ಮಾಡಲು ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಿಕ್ಷಣ ಪ್ರಶಸ್ತಿಗೆ ಭಾಜನರಾದ ಕುಮಾರ್.ಎಸ್.ಜಿ, ಎಲ್.ಗಿರಿಜ, ಪಾರ್ವತಮ್ಮ.ಸಿ, ಗಂಗಹೊನಯ್ಯ, ತಿಮ್ಮೇಗೌಡ.ಬಿ.ಸಿ, ಕುಮಾರಿ.ಎಂ, ಮರ್ಲಿನ್.ವಿ, ಪದ್ಮಾವತಿ.ಎಂ.ಸಿ, ವೀರಭದ್ರಪ್ಪ ಟಿ.ವಿ, ವಸಂತ ಆರ್.ಎನ್ಮ ಜೋಸೆಫ್, ಡಾ.ಸಂಧ್ಯ ಅವರು ಸೇರಿ ಒಟ್ಟು 12 ಮಂದಿಯನ್ನು ಅಭಿನಂದಿಸಲಾಯಿತು.
ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಜಯಲಿಂಗಸ್ವಾಮಿ, ಹಿರಿಯ ಅಧಿಕಾರಿಗಳಾದ ಮೋಹನ್ಕುಮಾರ್, ಗೋಪಾಲಕೃಷ್ಣ, ವೆಂಕಟೇಶ್, ಬಿಇಒಗಳಾದ ರಮೇಶ್, ನಾರಾಯಣ್, ಪ್ರಭಾ, ಪುಟ್ಟರಾಜು, ಶಿಕ್ಷಕರ ಸಂಘದ ಪ್ರತಿನಿಧಿಗಳಾದ ಗಿರೀಶ್, ಗಿರಿಗೌಡ, ನರಸಿಂಹಮೂರ್ತಿ, ರೇವಣ್ಣ, ರಾಮಾನಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.