ಬೆಂಗಳೂರು: “ಒಂದು ಮೊತ್ಟೆಯ ಕಥೆ” ಖ್ಯಾತಿಯ ರಾಜ್ ಬಿ. ಶೆಟ್ಟಿ ತಮ್ಮ ಮುಂದಿನ ಚಿತ್ರ “ಮಹಿರಾ” ದಲ್ಲಿ ಪೋಲೀಸ್ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
“ಮಹಿರಾ” ಎನ್ನುವುದು ಸಂಸ್ಕೃತ ಮೂಲದ ಪದವಾಗಿದ್ದು ಗಟ್ಟಿ ಮಹಿಳೆ ಅಥವಾ ಬಲಿಷ್ಠ ಮಹಿಳೆ ಎನ್ನುವ ಅರ್ಥ ಬರುತ್ತದೆ.ಇದು ಚಿತ್ರದ ಕಥೆಗೆ ಸೂಕ್ತವಾಗಿ ಹೊಂದುತ್ತದೆ ಎಂದು ಕನ್ನಡ ದಲ್ಲಿ ಚೊಚ್ಚಲ ನಿರ್ದೇಶನಕ್ಕಿಳಿದಿರುವ ಮಹೇಶ್ ಗೌಡ ಹೇಳಿದ್ದಾರೆ.”ಆದರೆ ಈ ಚಿತ್ರದ ಮೂಲಕ ನಾವೆನೂ ಮಹಿಳಾ ಸಬಲೀಕರಣ ಕುರಿತ ಸಂದೇಶ ಸಾರಲು ಹೊರಟಿಲ್ಲ, ಇದೊಂದು ತಾಯಿ-ಮಗಳ ಕಥೆ, ಸಸ್ಪೆನ್ಸ್-ಥ್ರಿಲ್ಲರ್ ಹಿನ್ನೆಲೆ ಹೊಂದಿರಲಿದೆ” ಅವರು ಹೇಳಿದರು.
ರಾಜ್ ಬಿ. ಶೆಟ್ಟಿ ಈ ಚಿತ್ರದಲಿ ಓರ್ವ ಬುದ್ದಿವಂತ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು ವರ್ಜಿನಿಯಾ ರೊಡ್ರಿಗಸ್ ಮತ್ತು ಚೈತ್ರ ಆಚಾರ್ ಕ್ರಮವಾಗಿ ತಾಯಿ ಮತ್ತು ಮಗಳ ಪಾತ್ರ ನಿರ್ವಹಿಸಲಿದ್ದಾರೆ.
ವರ್ಜಿನಿಯಾ ಅವರು ಪ್ರಸಿದ್ದ ರಂಗ ಕಲಾವಿದೆಯಾಗಿದ್ದು ಇವರು ಎಂಎಸ್ ಸತ್ಯು ಅವರಲ್ಲಿ ರಂಗಭೂಮಿ ತರಬೇತಿ ಪಡೆದಿದ್ದಾರೆ. ಅಲ್ಲದೆ ಲಂಡನ್ ನಲ್ಲಿ ನಾಟಕಗಳ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.
ಶಾಂತಿಯುತ ಜೀವನ ನಡೆಸುತ್ತಿದ್ದ ತಾಯಿ-ಮಗಳ ಜೀವನದಲ್ಲಿ ಕೆಲ ಅನಿರೀಕ್ಷಿತ ಘಟನೆಗಳಿಂದ ಶಾಂತಿ ಭಂಗವಾಗುತ್ತದೆ. ಅನಪೇಕ್ಷಿತ ಬೆದರಿಕೆಗಳ ಸರಣಿ ಬರಲು ಪ್ರಾರಂಭವಾದಾಗ ತಾಯಿ ಅದೆಲ್ಲವನ್ನೂ ಮೀರಿ ತನ್ನ ಮಗಳ ರಕ್ಷಣೆಗೆ ಹೇಗೆ ಹೋರಾಡುತ್ತಾಳೆ” ಮಹೇಶ್ ಹೇಳುತ್ತಾರೆ.
ಚಿತ್ರದಲ್ಲಿ ಅನೇಕ ತಿರುವುಗಳಿರಲಿದ್ದು ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ಕುತೂಹಲ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ.ಎನ್ನುವುದು ನಿರ್ದೇಶಕರ ಮಾತು.
ಇಂದು (ಸೋಮವಾರ) ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.ಜಾಕ್ಪಾಟ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುವ ಈ ಚಿತ್ರ ಸಧ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ನೀಲೀಮಾ ರಾವ್ ಮತ್ತು ರಾಕೇಶ್ ಯುಪಿ “ಮಹಿರಾ” ಗೆ ಸಂಗೀತ ನೀಡಿದ್ದರೆ ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ.
ಮಹೇಶ್ ಗೌಡ ಹಿನ್ನೆಲೆ
ಲಂ<ಡನ್ ನ ಫಿಲ್ಮ್ ಅಕ್ಯಾಡೆಮಿಯಲ್ಲಿ ಎಂಜಿನಿಯರ್ ಮತ್ತು ಎಂಬಿಎ ಪದವಿ ಅಧ್ಯಯನ ನಡೆಸಿರುವ ಮಹೇಶ್ ಗೌಡ ಮೂರು ವರ್ಷಗಳಿಂದ ಸಾಗರೋತ್ತರ ಕಾರ್ಪೋರೆಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನು ಸಮರ ಕಲೆ ಮತ್ತು ನೃತ್ಯ ಸಂಯೋಜನೆಯಲ್ಲಿ ಆಸಕ್ತಿ ಹೊಂದಿದ್ದೆ. 2013 ರಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಮನರಂಜನಾ ಮಾದ್ಯಮದ ಸಾಧ್ಯತೆಗಳು ಅರಿವಾಗಿತ್ತು. ಇದೇ ನನ್ನನ್ನು ಭಾರತಕ್ಕೆ ಮರಳುವಂತೆ ಮಾಡಿದೆ.ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನವೇ ರಾಜ್ ಅವರ ಬಗ್ಗೆ ತಿಳಿದಿದ್ದೆ ಎಂದು ನಿರ್ದೇಶಕ ವಿವರಿಸಿದರು.