ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಆರ್. ಪಿ. ಸಿಂಗ್ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಆರ್ . ಪಿ. ಸಿಂಗ್ ಎಡಗೈ ವೇಗಿಯಾಗಿದ್ದು, ನಿವೃತ್ತಿ ನಿರ್ಧಾರವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
13 ವರ್ಷಗಳ ಹಿಂದೆ 2005 ಸೆಪ್ಟೆಂಬರ್ 4 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಆರ್. ಪಿ. ಸಿಂಗ್, ಇದು ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣಗಳಿಗೆ ಅಡಿಗಲ್ಲು ಹಾಕಿತ್ತು ಎಂದು ಸಿಂಗ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕ್ರಿಕೆಟ್ ವೃತ್ತಿಯಲ್ಲಿ ಸುಧೀರ್ಘ ಕಾಲ ಪಯಣಿಸಲು ಸಹಕರಿಸಿದ್ದ ಎಲ್ಲರಿಗೂ ಧನ್ಯವಾದ ಆರ್ಪಿಸುವುದಾಗಿ ಅವರು ಹೇಳಿದ್ದಾರೆ.ಆರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿದ್ದ ಆರ್ . ಪಿ. ಸಿಂಗ್ , ಮೂರು ಮಾದರಿಯ 82 ಪಂದ್ಯಗಳನ್ನಾಡಿದ್ದು, 100 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
2007ರಲ್ಲಿ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಆರ್. ಪಿ. ಸಿಂಗ್ ಹಿರೋ ರೀತಿ ಮಿಂಚಿದ್ದರು. ಇದೇ ವರ್ಷ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಟೆಸ್ಟ್ ಪಂದ್ಯ ಜಯಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.