ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಬೆಳಗಾವಿಯ ಪಿಎಲ್ಡಿ ಬ್ಯಾಂಕ್ ಚುನಾವಣಾ ಜಟಾಪಟಿಯ ಕಾನೂನು ಸಮರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮೊದಲ ಗೆಲುವಾಗಿದೆ. ಈ ಮೂಲಕ ಪಿಎಲ್ಡಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಲು ನಡೆಸಿದ ಪ್ರಯತ್ನದಲ್ಲಿ ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾಗಿದೆ.
ಪಿಎಲ್ಡಿ ಬ್ಯಾಂಕ್ ಚುನಾವಣೆ ನಡೆಸುವಂತೆ ಆಗ್ರಹಿಸಿ ಜಾರಕಿಹೊಳಿ ಸಹೋದರರ ವಿರುದ್ಧ ಬೀದಿಗಿಳಿದು ಲಕ್ಷ್ಮೀ ಹೆಬ್ಬಾಳಕರ್ ಹೋರಾಟ ನಡೆಸಿದ್ದರು. ಚುನಾವಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಬೆಳಗಾವಿ ತಹಶೀಲ್ದಾರ್ ಚುನಾವಣೆಯನ್ನು ಮುಂದೂಡಿದ್ದರು. ಈಗ ಮಾನ್ಯ ಧಾರವಾಡ ಹೈಕೊರ್ಟ್ ಚುನಾವಣೆ ನಡೆಸುವಂತೆ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಂಗಳವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಸಮುದ್ರ ಇದ್ದಂತೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಎಲ್ಲ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೈಕಮಾಂಡ್ ಅವಕಾಶ ನೀಡಿದೆ. ಅದ್ದರಿಂದ ಪಕ್ಷದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು. ಪಕ್ಷದ ಒಳಿತಿಗಾಗಿ ತಗ್ಗಿ, ಬಗ್ಗಿ ನಡೆಯಲು ನಾನು ಸಿದ್ಧವಾಗಿದ್ದು, ಆದರೆ ಕ್ಷೇತ್ರ ವಿಚಾರ ಬಂದಾಗ ನಾನು ನ್ಯಾಯ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದರು.
ಕಾಂಗ್ರೆಸ್ ಸಭೆಯಲ್ಲಿ ರಮೇಶ ಜಾರಕಿಹೊಳಿ, ಡಿಕೆಶಿ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಡೆದಿರುವುದು ಬೇರೆ, ಮಾಧ್ಯಮದಲ್ಲಿ ವರದಿ ಮಾಡಿರುವುದು ಬೇರೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಪಕ್ಷ ಸಂಘಟನೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತೆವೆ. ಆದರೆ ಪಕ್ಷದ ಸಭೆಯಲ್ಲಿ ನನ್ನ ವಿಚಾರದಲ್ಲಿ ರಮೇಶ ಜಾರಕಿಹೊಳಿ, ಡಿಕೆ ಶಿವಕುಮಾರ್ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ಆದರೆ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಕೆಲ ಮಾತುಕತೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದರು.