ಬೆಂಗಳೂರು,ಸೆ.5-ವಿಶ್ವವಿದ್ಯಾನಿಲಯಗಳಲ್ಲಿ ಉಪಕುಲಪತಿಗಳ ನೇಮಕ, ಸಿಂಡಿಕೇಟ್ ಸದಸ್ಯರ ಆಯ್ಕೆ ಸೇರಿದಂತೆ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ವಿವಿಗಳ ಆಂತರಿಕ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿವಿಗಳ ಉಪಕುಲಪತಿ, ಸಿಂಡಿಕೇಟ್ ಸದಸ್ಯರ ನೇಮಕಾತಿ ಸೇರಿದಂತೆ ಆಡಳಿತ ಮಂಡಳಿಯ ತೀರ್ಮಾನದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸೆಂಟ್ರಲ್ ಕಾಲೇಜಿನಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಸ್ನಾತಕೋತ್ತರ ಕಲಾ ನಿಕಾಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಆದರೆ ಕೆಲವು ತೀರ್ಮಾನಗಳಲ್ಲಿ ಹಸ್ತಕ್ಷೇಪ ಮಾಡುವುದರಿಂದ ನಿರೀಕ್ಷಿತ ಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ ಎಂದು ವಿಷಾದಿಸಿದರು.
ವಿವಿಗಳ ದೈನಂದಿನ ಚಟುವಟಿಕೆಗಳಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡದಂತೆ ಸಮಿತಿಯೊಂದನ್ನು ರಚನೆ ಮಾಡಿದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನೀವು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಪ್ರತಿಯೊಂದು ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಲು ಅಧ್ಯಾಪಕ ವರ್ಗ ಬದ್ಧವಾಗಿರಬೇಕೆಂದು ಸಲಹೆ ಮಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ತಯಾರಿ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆಯನ್ನು ಎದುರಿಸುವಂತಾಗಿದೆ. ನಿಮಗೆ ಎಲ್ಲಾ ರೀತಿಯಲ್ಲೂ ಆರ್ಥಿಕ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ನೀವು ಕೂಡ ಉತ್ತಮ ಫಲಿತಾಂಶ ತಂದುಕೊಡಬೇಕೆಂದು ಸಿಎಂ ಕಿವಿ ಮಾತು ಹೇಳಿದರು.
ಬಡವರು, ಮಧ್ಯಮವರ್ಗದವರು, ಕಾರ್ಮಿಕ ಮಕ್ಕಳು, ಆರ್ಥಿಕವಾಗಿ ದುರ್ಬಲವಾದವರಿಗೆ ಶಿಕ್ಷಣ ಸಿಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣದ ಮೂಲ ಉದ್ದೇಶವೇ ಪ್ರತಿಯೊಬ್ಬ ನಾಗರಿಕನನ್ನು ಉತ್ತಮ ಪ್ರಜೆಯನ್ನಾಗಿ ಮಾಡುವುದು. ರಾಷ್ಟ್ರಪತಿಯಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಪ್ರಯುಕ್ತ ಆಚರಣೆ ಮಾಡುತ್ತಿರುವ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ನಾವೆಲ್ಲರೂ ಶಪಥ ಮಾಡೋಣ ಎಂದರು.
ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 171 ಪದವಿಪೂರ್ವ ಕಾಲೇಜುಗಳ ಮಂಜೂರಾತಿಗೆ ಅನುಮತಿ ನೀಡಿದ್ದೆ. ಪ್ರಾಥಮಿಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳ ಕಟ್ಟಡ ದುರಸ್ತಿ, ಮೂಲಭೂತ ಸೌಕರ್ಯ ಕಲ್ಪಿಸಲು ಒಂದು ಸಾವಿರ ಕೋಟಿ ಆರ್ಥಿಕ ನೆರವು ನೀಡಲಾಗಿತ್ತು ಎಂದು ಹೇಳಿದರು.
ಶಿಕ್ಷಣಕ್ಕೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿದೆ. ಪ್ರಾಥಮಿಕ, ಪ್ರೌಢಶಾಲೆಗಳು, ಪದವಿಪೂರ್ವ, ಪದವಿ, ವಿವಿಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದು ಮಕ್ಕಳನ್ನು ಇಂದಿನ ಸದೃಢ ಜಗತ್ತಿನ ಜೊತೆ ಸೆಣಸಾಡಲು ಸಜ್ಜುಗೊಳಿಸಿರಿ. ನಿಮ್ಮ ಜೊತೆ ನಾವು ಸದಾ ಇರುತ್ತೇವೆ ಎಂದು ವಾಗ್ದಾನ ಮಾಡಿದರು.
ವಿವಿ ಉಪಕುಲಪತಿ ಪೆÇ್ರ.ಎನ್.ಜಾಫೆಟ್ ಮಾತನಾಡಿ, ವಿವಿಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಆರ್ಥಿಕ ಸಹಾಯದ ಅಗತ್ಯವಿದೆ. ಇದಕ್ಕಾಗಿ ಸರ್ಕಾರ 600 ಕೋಟಿ ನೆರವು ನೀಡಬೇಕೆಂದು ಮನವಿ ಮಾಡಿದರು.
ಈ ವಿಶ್ವವಿದ್ಯಾನಿಲಯದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕøತ ಸರ್.ಸಿ.ವಿ.ರಾಮನ್, ಕನ್ನಡದ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕರ್ನಾಟಕ ರತ್ನ ಕುವೆಂಪು ಸೇರಿದಂತೆ ಅನೇಕ ದಿಗ್ಗಜರು ಇಲ್ಲಿ ವ್ಯಾಸಂಗ ಮಾಡಿದ್ದಾರೆ. ಈ ವಿವಿ ಯಾವುದೇ ಜಾಗತಿಕ ವಿವಿಗೆ ಪೈಪೆÇೀಟಿ ನೀಡುವಷ್ಟು ಬೆಳೆದಿದೆ. ಮುಂದೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಶಾಸಕ ರೋಷನ್ ಬೇಗ್, ಕುಲಸಚಿವ ಪೆÇ್ರ.ರಾಮಚಂದ್ರೇಗೌಡ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕೆ ಮತ್ತಿತರರು ಇದ್ದರು.