ಬೆಂಗಳೂರು: ಕರ್ನಾಟಕದಲ್ಲಿ ಡಬ್ಬಿಂಗ್ ವಿವಾದ ತಾರಕಕ್ಕೇರಿರುವಂತೆಯೇ ಡಬ್ಬಿಂಗ್ ಗೆ ವಿರೋಧ ವ್ಯಕ್ತಪಡಿಸಿದ ಕಾರಣ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಭಾರಿ ಪ್ರಮಾಣದ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ನಟ ಅಜಿತ್ ಅಭಿನಯದ ಸತ್ಯದೇವ್ ಐಪಿಎಸ್ ಚಿತ್ರದ ಡಬ್ಬಿಂಗ್ ಅವತರಣಿಕೆಗೆ ಬಿಡುಗಡೆ ಮಾಡಲು ಅವಕಾಶ ನೀಡದ ಕಾರಣ ಸಿಸಿಐ (ಭಾರತೀಯ ಸ್ಪರ್ಧಾತ್ಮಕ ಆಯೋಗ) ದಂಡ ವಿಧಿಸಿದ್ದು, ಈ ಪೈಕಿ ಕರ್ನಾಟಕ ಚಲನಚಿತ್ರ ಮಂಡಳಿಗೆ ದುಬಾರಿ ಅಂದರೆ 9, 72, 943ರೂ ಗಳನ್ನು ದಂಡವಾಗಿ ವಿಧಿಸಿದೆ.
ಅಂತೆಯೇ ನಟ ಜಗ್ಗೇಶ್ ಅವರಿಗೂ ಆಯೋಗ ದಂಡ ವಿಧಿಸಿದ್ದು, ಜಗ್ಗೇಶ್ ಅವರಿಗೆ 2, 71, 286 ರೂ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಅವರಿಗೆ 15, 121 ರೂ ದಂಡ ವಿಧಿಸಿದೆ.
ಈ ಹಿಂದೆ ತಮಿಳುನಟ ಅಜಿತ್ ಅವರ ಅಭಿನಯದ ಸತ್ಯದೇವ್ ಐಪಿಎಸ್ ಡಬ್ಬಿಂಗ್ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡಿಲ್ಲ ಎಂದು ಚಿತ್ರದ ವಿತರಕರು ಸಿಸಿಐಗೆ ದೂರು ನೀಡಿದ್ದರು. ಈ ದೂರಿನ ವಿಚಾರಣೆ ನಡೆಸಿದ ಸಿಸಿಐ ಇಂದು ತನ್ನ ತೀರ್ಪು ನೀಡಿದೆ.
ಪ್ರಮುಖ ಅಂಶವೆಂದರೆ ಇದೇ ಅಜಿತ್ ಅಭಿನಯದ ಮತ್ತೊಂದು ಚಿತ್ರ ಕಮಾಂಡೋ ಕೂಡ ಡಬ್ಬಿಂಗ್ ಆಗಿದ್ದು, ಈ ಡಬ್ಬಿಂಗ್ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು.