ಬೆಂಗಳೂರು, ಸೆ.4- ಸ್ಟೀಲ್ಬ್ರಿಡ್ಜ್, ವೈಟ್ ಟ್ಯಾಪಿಂಗ್ನಂತಹ ಯೋಜನೆಗಳ ಮೂಲಕ ಕೋಟ್ಯಂತರ ರೂ. ಲೂಟಿ ಮಾಡುವ ಉದ್ದೇಶದಿಂದ ಹೊರಗಿನ ಎಂಎಲ್ಸಿಗಳನ್ನು ತಂದು ಮೇಯರ್ ಸ್ಥಾನಕ್ಕೆ ಮತ ಹಾಕಿಸುವ ಹುನ್ನಾರವನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ನಡೆಸಿದೆ ಎಂದು ಗಂಭೀರ ಆರೋಪ ಮಾಡಿರುವ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಸದಸ್ಯ ಜಯರಾಮ್ ರಮೇಶ್, ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ರಘು ಆಚಾರ್, ಕೋಲಾರದ ಸಿ.ಆರ್.ಮನೋಹರ್, ಪಾವಗಡದ ಉಗ್ರಪ್ಪ ಮುಂತಾದವರನ್ನೆಲ್ಲ ವಿಳಾಸ ಬದಲಾಯಿಸಿ ಮೇಯರ್ ಚುನಾವಣೆ ಸಂದರ್ಭದಲ್ಲಿ ಮತ ಹಾಕಿಸಿ ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಲಾಗಿದೆ.
ಕಳೆದ ಬಾರಿಯೂ ಇದೇ ರೀತಿ ತಂತ್ರ ಅನುಸರಿಸಿ ಗೆಲುವು ಸಾಧಿಸಿ ಬಿಬಿಎಂಪಿಯ ಅಪಾರ ಅನುದಾನವನ್ನು ಲೂಟಿ ಮಾಡಲಾಗಿತ್ತು. ಈ ಬಾರಿಯೂ ಕೂಡ ಅದೇ ರೀತಿ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿರುವ ಅವರು, ನ್ಯಾಯಾಲಯದಲ್ಲಿ ನಮಗೆ ಗೆಲುವು ಸಿಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿ ನೂರು ಸದಸ್ಯಬಲವಿರುವ ಬಿಜೆಪಿ, ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲಿದೆ. ಮನೋಹರ್, ರಘು ಆಚಾರ್ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಸರ್ಕಾರಿ ಅನುದಾನವನ್ನು ಅವರ ಕ್ಷೇತ್ರಕ್ಕೆ ಬಳಸಿಕೊಳ್ಳುತ್ತಾರೆ. ಇಲ್ಲಿ ಬಂದು ಮತ ಹಾಕುತ್ತಾರೆ. ಇದು ಎಷ್ಟು ಸಮಂಜಸ. ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುತ್ತೇವೆ. ಬಿಜೆಪಿಗೆ 7 ಮತಗಳ ಕೊರತೆ ಇದೆ. ಪಕ್ಷೇತರರು ಬೆಂಬಲಿಸಿದರೆ ನಾವು ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಬಹುದು. ನಾವು ಅವರ ಬೆಂಬಲವನ್ನು ಕೇಳುವುದಿಲ್ಲ. ಆದರೂ ಈ ಬಾರಿ ಬಿಜೆಪಿಯೇ ಬಿಬಿಎಂಪಿಯಲ್ಲಿ ಅಧಿಕಾರ ಹಿಡಿಯಲಿದೆ. ನಮ್ಮ ಪಕ್ಷದವರೇ ಮೇಯರ್ ಆಗಲಿದ್ದಾರೆ ಎಂದು ಪದ್ಮನಾಭರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಜನಾದೇಶಕ್ಕೆ ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸುತ್ತಿದೆ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಈ ಅಧಿಕಾರ ಬಹಳ ದಿನಗಳು ಉಳಿಯುವುದಿಲ್ಲ. ನ್ಯಾಯಾಲಯದ ಮೂಲಕ ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದು ಅವರು ಹೇಳಿದರು.