ಬೆಂಗಳೂರು, ಸೆ.4- ಕೇಂದ್ರ ಜಾರಿಗೆ ತಂದಿರುವ ಫಸಲ್‍ಭೀಮಾ ಯೋಜನೆಯಿಂದ ಕೇವಲ ರೈತರ ಮೂಗಿಗೆ ತುಪ್ಪ ಸವರುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.70ರಷ್ಟು ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗಾಗಿ ಹಲವು ಕಾರ್ಯಕ್ರಮಗಳನ್ನು ಯುಪಿಎ ಸರ್ಕಾರ ನೀಡಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರ ಅಂತಹ ಯಾವುದೇ ಕಾರ್ಯಕ್ರಮವನ್ನು ನೀಡಿಲ್ಲ ಎಂದು ಹೇಳಿದರು.
ಫಸಲ್‍ಭೀಮಾ ಯೋಜನೆ ರೈತರಿಗಿಂತ ಖಾಸಗಿ ಸಂಸ್ಥೆಗೆ ಅನುಕೂಲವಾಗಿದೆ. ಈ ಯೋಜನೆ ಮೂಲಕ ಖಾಸಗಿ ವಿಮಾ ಕಂಪೆನಿಗೆ ಲಾಭ ಮಾಡಿಕೊಟ್ಟಂತಾಗಿದೆ. ಬೀದರ್ ಒಂದರಲ್ಲೇ 180 ಕೋಟಿ ಲಾಭವಾಗಿದೆ. ಇನ್ನು ದೇಶದಲ್ಲಿ 700 ಜಿಲ್ಲೆಗಳಿವೆ. ಆ ಜಿಲ್ಲೆಗಳಿಂದ ಎಷ್ಟು ಲಾಭ ಮಾಡಿಕೊಟ್ಟಿರಬಹುದೆಂದು ಪ್ರಶ್ನಿಸಿದರು.
ಬರೀ ಬೊಗಳೆ ಬಿಡುವುದನ್ನೇ ಕಾಯಕ ಮಾಡಿಕೊಂಡಿರುವ ಕೇಂದ್ರ ಸರ್ಕಾರ ಫಸಲ್‍ಭೀಮಾ ಯೋಜನೆಗೆ 13ಸಾವಿರ ಕೋಟಿ ರೂ. ಇಟ್ಟಿದೆ. ರಾಜ್ಯಗಳು ಸಹ 13 ಸಾವಿರ ಕೋಟಿ ಇಟ್ಟಿವೆ. ಈ ಯೋಜನೆಯಿಂದ ರೈತರಿಗೆ ಮಾತ್ರ ಲಾಭವಾಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು. ವಿಮೆ ಹಣ ಎಲ್ಲಿ ಹೋಗುತ್ತಿದೆ ಎಂದು ಬಹಿರಂಗವಾಗಬೇಕೆಂದು ಆಗ್ರಹಿಸಿದರು.
ಬೆಳಗಾವಿ ಕಾಂಗ್ರೆಸ್‍ನಲ್ಲಿನ ಅಸಮಾಧಾನ ಸಮಸ್ಯೆಯನ್ನು ಈಗಾಗಲೇ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗೆಹರಿಸಿದ್ದಾರೆ. ಬೆಳಗಾವಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷೇತರರನ್ನು ನಿಲ್ಲಿಸಿರುವ ನಡೆಯನ್ನು ಸಮರ್ಥಿಸಿಕೊಂಡ ಅವರು, ಪಕ್ಷೇತರರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವುದು ಸಾಮಾನ್ಯ. ಕಳೆದ 10 ವರ್ಷಗಳಿಂದಲೂ ಇದು ನಡೆಯುತ್ತಿದೆ. ಈ ಬಗ್ಗೆ ನಮ್ಮ ಹಿರಿಯರೂ ಸಹ ಹೇಳಿದ್ದಾರೆ. ಇದಕ್ಕೆಲ್ಲ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದರು.