ಬೆಂಗಳೂರು, ಸೆ.4- ಪ್ರವಾಹ ಪೀಡಿತ ಕೇರಳಕ್ಕೆ ರಿಲಯನ್ಸ್ ಫೌಂಡೇಶನ್ 21 ಕೋಟಿ ರೂ. ಪರಿಹಾರ ಧನ ನೀಡಿದೆ.
ಸಂಸ್ಥೆಯ ಮುಖ್ಯಸ್ಥೆ ನೀತಾ ಎಂ.ಅಂಬಾನಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಭೇಟಿ ಮಾಡಿ ಚೆಕ್ ವಿತರಿಸಿದರು. ಮಾತ್ರವಲ್ಲ ಫೌಂಡೇಶನ್ ವತಿಯಿಂದ 50 ಕೋಟಿ ರೂ. ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವಿತರಿಸಲಾಗಿದೆ.
ಅತಿ ಹೆಚ್ಚು ಹಾನಿಗೊಳಗಾದ ಅಲಪ್ಪುಳ ಜಿಲ್ಲೆಯ ಪಳ್ಳಿಪ್ಪರಾಡ್ ಗ್ರಾಮಕ್ಕೆ ಖುದ್ದು ಭೇಟಿ ನೀಡಿದ ನೀತಾ ಅವರು ಪರಿಸ್ಥಿತಿಯನ್ನು ವೀಕ್ಷಿಸಿ, ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.
ಕಷ್ಟದ ಸಮಯದಲ್ಲಿ ಕೇರಳದ ಜನತೆಗೆ ಬೆಂಬಲ ನೀಡಲು ರಿಯಲನ್ಸ್ ಫೌಂಡೇಶನ್ ಬದ್ಧವಾಗಿದೆ. ನಿಮ್ಮ ಜೊತೆ ನಾವೂ ಇದ್ದೇವೆ. ರಾಜ್ಯ ಸದ್ಯದಲ್ಲೇ ತನ್ನ ವೈಭವವನ್ನು ಮರಳಿ ಪಡೆಯುತ್ತದೆ ಎಂದು ನೀತಾ ಅಂಬಾನಿ ವಿಶ್ವಾಸ ವ್ಯಕ್ತಪಡಿಸಿದರು.
ಫೌಂಡೇಶನ್ ವತಿಯಿಂದ 30 ಮಂದಿಯ ತಂಡ ಆಗಸ್ಟ್ 14ರಿಂದ ಕೇರಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.ಶುಲ್ಕ ರಹಿತ ಸಹಾಯವಾಣಿ ಮೂಲಕ 1600ಕ್ಕೂ ಹೆಚ್ಚು ಜನರನ್ನು ರಕ್ಷಿಸಿದೆ. ಸಾಂಕ್ರಾಮಿಕ ರೋಗ ಹರಡದಂತೆ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.