ಬೆಂಗಳೂರು, ಸೆ.4- ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ವಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಬಸ್ ಪ್ರಯಾಣ ದರದ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕಳೆದ ಎರಡುವರೆ ತಿಂಗಳ ಹಿಂದೆಯೇ ಸಾರಿಗೆ ಸಂಸ್ಥೆಗಳು ಬಸ್ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಮಾಡಿದ್ದವು. ಆನಂತರವೂ ಡೀಸೆಲ್ ಪ್ರತಿ ವಾರವೂ ಏರಿಕೆಯಾಗುತ್ತಿದೆ. ಪ್ರಯಾಣಿಕರಿಗೂ ಹೆಚ್ಚು ಹೊರೆಯಾಗದಂತೆ, ಸಾರಿಗೆ ಸಂಸ್ಥೆಗಳಿಗೂ ನಷ್ಟವಾಗದಂತೆ ಪ್ರಯಾಣ ದರ ಹೆಚ್ಚಳಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಕೆಎಸ್‍ಆರ್‍ಟಿಸಿಗೆ ಡೀಸೆಲ್ ದರ ಹೆಚ್ಚಳದಿಂದ ಸುಮಾರು 186 ಕೋಟಿ ರೂ.ನಷ್ಟು ಹೊರೆಯಾಗಿದೆ ಎಂದು ಹೇಳಿದರು.
ಒಂದು ವಾರದಲ್ಲಿ ಇತ್ಯರ್ಥ:
ವಿದ್ಯಾರ್ಥಿಗಳ ಉಚಿತ ಬಸ್‍ಪಾಸ್ ಗೊಂದಲವನ್ನು ಇನ್ನೊಂದು ವಾರದಲ್ಲಿ ಇತ್ಯರ್ಥ ಪಡಿಸಲಾಗುವುದು. ಮುಖ್ಯಮಂತ್ರಿಗಳೊಂದಿಗೆ ಬಸ್ ಪಾಸ್ ನೀಡುವ ಸಂಬಂಧ ಒಂದು ವಾರದಲ್ಲಿ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಶೇ.25ರಷ್ಟು ನೀಡುತ್ತಿದ್ದ ಹಣವನ್ನು ಶೇ.50ರಷ್ಟು ಹೆಚ್ಚಳ ಮಾಡಲು ನಿರ್ಧಾರವಾಗಿದೆ. ಹೀಗಾಗಿ ಸರ್ಕಾರ ಶೇ.50ರಷ್ಟು ಹಾಗೂ ಸಮಾಜ ಕಲ್ಯಾಣ ಇಲಾಖೆ ಶೇ.50ರಷ್ಟು ಬಸ್ ಪಾಸ್ ದರವನ್ನು ಭರಿಸಲಿವೆ ಎಂದರು.
ಸ್ಲೀಪರ್ ಕೋಚ್ ಬಸ್ ಖರೀದಿ:
ದೂರದ ಊರುಗಳಿಗೆ ಸ್ಲೀಪರ್ ಕೋಚ್ ಬಸ್‍ಗಳ ಬೇಡಿಕೆ ಇರುವುದರಿಂದ ಹೊಸದಾಗಿ 40 ಬಸ್‍ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ರಜಾ ದಿನಗಳಲ್ಲಿ ಹೆಚ್ಚು ಬಸ್‍ಗಳನ್ನು ದೂರದೂರಿಗೆ ಓಡಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಖಾಸಗಿ ಬಸ್‍ಗಳ ಹಾವಳಿಗೂ ಹಂತ ಹಂತವಾಗಿ ಕಡಿವಾಣ ಹಾಕಲಾಗುವುದು. ಕೆಲವು ಮಾರ್ಗಗಳಲ್ಲಿ ನಷ್ಟ ವಾಗುತ್ತಿದ್ದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸಂಸ್ಥೆಗಳ ಬಸ್‍ಗಳನ್ನು ಓಡಿಸಲಾಗುತ್ತಿದೆ ಎಂದರು.
ಬೆಂಗಳೂರಿನಲ್ಲಿ ಸ್ವಂತ ಮೂಲಸೌಲಭ್ಯ ಇರುವ ಬಸ್‍ಗಳನ್ನು ಹೊರತುಪಡಿಸಿ ಉಳಿದೆಲ್ಲ ಖಾಸಗಿ ಬಸ್‍ಗಳನ್ನು ತುಮಕೂರು ರಸ್ತೆಯ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸುವ ಚಿಂತನೆ ಇದೆ. ರಸ್ತೆಗಳಲ್ಲಿ ನಿಲ್ಲಿಸುವ ಖಾಸಗಿ ಬಸ್‍ಗಳನ್ನು ಈ ನಿಲ್ದಾಣಕ್ಕೆ ಸ್ಥಳಾಂತರಿಸಿ ನಗರದ ವಿವಿಧ ಭಾಗಗಳಿಂದ ಪ್ರಯಾಣಿಕರನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ಯಲು ಅನುಕುಲವಾಗುವಂತೆ ಬಿಎಂಟಿಸಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಾರಿಗೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪರಿಣಾಮಕಾರಿಯಾಗಿ ಖಾಸಗಿ ಬಸ್‍ಗಳಿಗೆ ಕಡಿವಾಣ ಹಾಕಲು ಆಗುತ್ತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಇನ್ಸ್‍ಪೆಕ್ಟರ್ ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.