ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬಿ.ಎಸ್.ಯಡಿಯೂರಪ್ಪರಿಂದ ವರಿಷ್ಠಿಗೆ ಸಮಗ್ರ ವರದಿ

ಬೆಂಗಳೂರು, ಸೆ.4- ನಿನ್ನೆ ಪ್ರಕಟಗೊಂಡ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಕ್ಷದ ವರಿಷ್ಠಿಗೆ ಸಮಗ್ರ ವರದಿ ನೀಡಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಪುರಸಭೆಯಲ್ಲಿ ಪಕ್ಷ ಗಳಿಸಿರುವ ಒಟ್ಟು ಸ್ಥಾನಗಳು ಮತ್ತು ಮತದಾರರಿಂದ ವ್ಯಕ್ತವಾಗಿರುವ ತೀರ್ಪಿನ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದರೂ 2013ರ ಚುನಾವಣೆಗಿಂತಲೂ ಬಿಜೆಪಿ ಹೆಚ್ಚಿನ ಸ್ಥಾನಗಳಿಸಿದೆ. ತಮ್ಮ ನಿರೀಕ್ಷೆಯಂತೆ ಸ್ಥಾನಗಳು ಬಾರದಿದ್ದರೂ ಫಲಿತಾಂಶ ತೃಪ್ತಿಕರ ತಂದಿದೆ ಎಂದು ವರದಿಯಲ್ಲಿ ಯಡಿಯೂರಪ್ಪ ವಿವರಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗಿದ್ದರೂ ನಾವು ಎರಡನೇ ಸ್ಥಾನ ಗಳಿಸಿದ್ದೇವೆ. ಆಡಳಿತ ಯಂತ್ರದ ದುರುಪಯೋಗ, ಹಣ ಹಾಗೂ ತೋಳ್ಬಲದ ನಡುವೆ ಮತದಾರ ನಮ್ಮನ್ನು ಕೈಬಿಟ್ಟಿಲ್ಲ.

ನಗರಸಭೆಯಲ್ಲಿ ನಾವು ಹೆಚ್ಚಿನ ಕಡೆ ಅಧಿಕಾರ ಹಿಡಿದಿದ್ದೇವೆ. ಮೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಕಡೆ ಸ್ಪಷ್ಟ ಬಹುಮತ ಪಡೆಯಲಾಗಿದೆ. ಉಳಿದೆರಡು ಕಡೆ ನಾವು ಹೆಚ್ಚಿನ ಸ್ಥಾನ ಕಳಿಸಿದ್ದೇವೆ. ಒಟ್ಟಾರೆ ಫಲಿತಾಂಶ ತೃಪ್ತಿದಾಯಕವಾಗಿದೆ ಎಂದು ಬಿಎಸ್‍ವೈ ಸಮರ್ಥಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಕನಿಷ್ಠ ಪಕ್ಷ ಶೇ.75ರಷ್ಟು ಸ್ಥಾನಗಳನ್ನಾದರು ಗೆಲ್ಲಬೇಕಿತ್ತು.ಕೆಲವು ಕಡೆ ಒಂದೆರಡು ಸ್ಥಾನಗಳನ್ನು ಪಡೆದಿದ್ದರೆ, ನಾವೇ ಅಧಿಕಾರ ಹಿಡಿಯಬಹುದಿತ್ತು.

ಪಕ್ಷೇತರ ಸದಸ್ಯರ ಬೆಂಬಲದಿಂದ ಕೆಲವು ಕಡೆ ಅಧಿಕಾರ ಹಿಡಿಯಲಿದ್ದೇವೆ ಎಂದು ಹೇಳಿದ್ದಾರೆ. ಈ ಫಲಿತಾಂಶವು ಮುಂಬರುವ ಲೋಕಸಭೆ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡರೂ ಜನತೆ ಬಿಜೆಪಿ ಪರ ಇದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ.
2014ರ ಲೋಕಸಭೆ ಚುನಾವಣೆಯಲ್ಲಿ ಗಳಿಸಿದ ಸ್ಥಾನಕ್ಕಿಂತಲೂ ನಾವು ಈ ಬಾರಿ ಹೆಚ್ಚಿನ ಸ್ಥಾನ ಪಡೆಯಲಿದ್ದೇವೆ. ಯಾವ ಯಾವ ಕಡೆ ಪಕ್ಷಕ್ಕೆ ಹಿನ್ನಡೆಯಾಗಿದೆಯೋ ಅಂತಹ ಕಡೆಗೆ ಒತ್ತು ನೀಡಿ ಪಕ್ಷವನ್ನು ಬಲಪಡಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಸಂಘಟನೆ ಭದ್ರವಾಗಿದ್ದು, ಯಾವುದೇ ಸಂದರ್ಭದಲ್ಲೂ ಲೋಕಸಭೆ ಚುನಾವಣೆ ಎದುರಾದರೂ ಸಮರ್ಥವಾಗಿ ಎದುರಿಸಲಿದ್ದೇವೆ ಎಂದು ಯಡಿಯೂರಪ್ಪ ವರದಿಯಲ್ಲಿ ಹೇಳಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ