ಕೊನೆಗೂ ಈಡೇರದ ಆಸೆ, ಗೆದ್ದ ಚಿನ್ನದ ಪದಕ ತೋರಿಸುವ ಮುನ್ನ ತಂದೆ ಸಾವು!

ನವದೆಹಲಿ: ಇಂಡೋನೇಷ್ಯಾದಲ್ಲಿ ಸುಮಾರು 15 ದಿನಗಳ ಕಾಲ ನಡೆದ ಏಶ್ಯನ್ ಗೇಮ್ಸ್ ಗೆ ಇತ್ತೀಚೆಗೆ ವರ್ಣರಂಜಿತ ತೆರೆ ಬಿದ್ದಿತ್ತು. ಭಾರತದ ತೇಜಿಂದರ್ ಪಾಲ್ ಸಿಂಗ್ ಅವರು ಶಾಟ್ ಫುಟ್  ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು.ಅದೇ ಖುಷಿಯಲ್ಲಿ ಊರಿನತ್ತ ಮರಳುತ್ತಿದ್ದ ತೇಜಿಂದರ್ ಗೆ ತಂದೆ ವಿಧಿವಶರಾದ ಸುದ್ದಿ ಸಿಕ್ಕಿದೆ. ತಂದೆಗೆ ಚಿನ್ನದ ಪದಕ ತೋರಿಸಬೇಕೆಂಬ ಸಿಂಗ್ ಕನಸು ಹಾಗೇ ಕಮರಿ ಹೋಗಿದೆ!

ತೇಜಿಂದರ್ ಪಾಲ್ ಸಿಂಗ್ ಅವರ ತಂದೆ ನಿಧನದ ಬಗ್ಗೆ ಟ್ವೀಟ್ ಮಾಡಿರುವ ಅಥ್ಲೇಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ, ಈ ಸುದ್ದಿ ಕೇಳಿ ಎಎಫ್ ಐಗೆ ಆಘಾತವಾಗಿದೆ. ನಾವು ಈಗಷ್ಟೇ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ತೇಜಿಂದರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದೇವು. ಆದರೆ ಇದೇ ಸಂದರ್ಭದಲ್ಲಿ ತೇಜಿಂದರ್ ತಂದೆ ನಿಧನರಾದ ಸುದ್ದಿಯ ಸಂದೇಶ ಕೂಡಾ ಬಂದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ತೇಜಿಂದರ್ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಿ ತಿಳಿಸಿದೆ.

ಮಗ ಏಶ್ಯನ್ ಗೇಮ್ಸ್ ನಲ್ಲಿ ಪಡೆಯುವ ಚಿನ್ನದ ಪದಕವನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕೆಂಬುದು ತೇಜಿಂದರ್ ಅವರ ತಂದೆ ಕರಮ್ ಸಿಂಗ್ ಅವರ ಆಸೆಯಾಗಿತ್ತಂತೆ. ಆದರೆ ವಿಧಿ ವಿಪರ್ಯಾಸ, ಕೊನೆಗೂ ಆ ಆಸೆ ಈಡೇರಲೇ ಇಲ್ಲ.

ಏಶ್ಯನ್ ಗೇಮ್ಸ್ ನಲ್ಲಿ ಗಳಿಸಿದ ಚಿನ್ನದ ಪದಕ ತನ್ನ ಕುಟುಂಬದವರ ಶ್ರಮ, ಪ್ರೀತಿಗೆ ಅರ್ಪಣೆ ಎಂದು ತೇಜಿಂದರ್ ಹೇಳಿದ್ದರು. ಹಲವಾರು ತ್ಯಾಗಗಳ ಬಳಿಕ ನಾನು ಪಡೆದ ಪದಕ ನನ್ನ ಜೀವನದ ಅತೀ ದೊಡ್ಡ ಸಾಧನೆಯಾಗಿದೆ. ನನ್ನ ತಂದೆ ಕರಮ್ ಸಿಂಗ್ ಕಳೆದ 2 ವರ್ಷಗಳಿಂದ ಕ್ಯಾನ್ಸರ್ ಗೆ ತುತ್ತಾಗಿ ಸಾವು, ಬದುಕಿನ ನಡುವೆ ಹೋರಾಡುತ್ತಿದ್ದರು. ಇಂತಹ ಸಂದರ್ಭದಲ್ಲೂ ನನ್ನ ಕುಟುಂಬದವರು ನನ್ನ ಗುರಿಯನ್ನು ಮುಟ್ಟಲು ಅವಕಾಶ ಮಾಡಿಕೊಟ್ಟಿದ್ದರು. ನನಗಾಗಿ ನನ್ನ ಕುಟುಂಬ ಸಾಕಷ್ಟು ತ್ಯಾಗ ಮಾಡಿದೆ ಎಂದು ತೇಜಿಂದರ್ ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ