ಮೈಸೂರು,ಸೆ.3- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟು 65 ವಾರ್ಡ್ಗಳ ಪೈಕಿ ಬಿಜೆಪಿ 22 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 19, ಜೆಡಿಎಸ್ 18 ಹಾಗೂ ಪಕ್ಷೇತರರು 5 ಮತ್ತು ಬಿಎಸ್ಪಿ ಒಂದು ವಾರ್ಡ್ಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿ ಅಧಿಕಾರ ಹಿಡಿಯಲು 35 ಸ್ಥಾನಗಳು ಅಗತ್ಯವಾಗಿವೆ.
ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರ ಅಧಿಕಾರ ನಡೆಸುತ್ತಿದ್ದುಘಿ, ಇಲ್ಲಿಯೂ ಕೂಡ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕಾರ್ಯತಂತ್ರ ಹೆಣೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಬಿಜೆಪಿಯವರು ಪಕ್ಷೇತರ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದು ಅಧಿಕಾರದ ಗದ್ದುಗೆ ಹಿಡಿಯಲು ತೆರೆಮರೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ಮೈಸೂರು ಮಹಾನಗರ ಪಾಲಿಕೆ ಗದ್ದುಗೆಯನ್ನು ಏರಲು ಪ್ರಮುಖ ಪಕ್ಷಗಳಿಗೆ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.
ಒಂದೆಡೆ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಪಕ್ಷೇತರರ ಓಲೈಕೆಗೆ ಮುಂದಾದರೆ, ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಪಾಲಿಕೆಯಲ್ಲೂ ಅಧಿಕಾರ ಹಿಡಿಯಲು ಹವಣಿಸುತ್ತಿದೆ.
ಕಳೆದ ಬಾರಿ ಬಿಜೆಪಿ ಕೇವಲ 13 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 20, ಜೆಡಿಎಸ್ 20, ಎಸ್ಡಿಪಿಐ 3, ಕೆಜೆಪಿ 1, ಬಿಎಸ್ಆರ್ 1, ಪಕ್ಷೇತರರು 7 ಮಂದಿ ಗೆದ್ದಿದ್ದರು.
ಈ ಬಾರಿ ಬಿಜೆಪಿ ಅತಿ ಹೆಚ್ಚು ಅಂದರೆ 22 ಸ್ಥಾನ ಗಳಿಸಿ ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿದೆ.