ಕೈಲಾಸನಾಥ ಸೌಹಾರ್ದ ಸಹಕಾರಿಗೆ ರೂ. 16 ಲಕ್ಷ ಲಾಭ
ಬೀದರ, ಸೆ. 03:- ನಗರದ ಕೈಲಾಸನಾಥ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವು 2017-18ನೇ ಸಾಲಿನಲ್ಲಿ ರೂ. 16 ಲಕ್ಷ ನಿವ್ವಳ ಲಾಭ ಗಳಿಸಿದೆ.
ಕೈಲಾಸನಾಥ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ 12ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಕ್ರಾಂತಿಕುಮಾರ ಕುಲಾಲ ಈ ಮಾಹಿತಿ ನೀಡಿದರು.
ಒಟ್ಟು ಲಾಭದಲ್ಲಿ ಶೇ 25 ಸದಸ್ಯರಿಗೆ ಕೊಡಲಾಗುವುದು ಎಂದು ಪ್ರಕಟಿಸಿದರು.
397 ಸದಸ್ಯರನ್ನು ಹೊಂದಿರುವ ಸೌಹಾರ್ದ ಸಹಕಾರಿಯು ವಿವಿಧ ಸೌಲಭ್ಯಗಳ ಮೂಲಕ ಸದಸ್ಯರಿಗೆ ನೆರವಾಗುತ್ತಿದೆ. ಪ್ರತಿ ವರ್ಷವೂ ಲಾಭದಲ್ಲಿ ಮುನ್ನಡೆಯುತ್ತಿದೆ. ಬರುವ ದಿನಗಳಲ್ಲಿ ಸದಸ್ಯರಿಗೆ ಇನ್ನೂ ಅನೇಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಇದೆ ಎಂದು ತಿಳಿಸಿದರು.
ಕೈಲಾಸನಾಥ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತವು ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತನ್ನ ಸದಸ್ಯರಿಗೆ ಜಿಲ್ಲೆಯಲ್ಲಿಯೇ ಅತಿಹೆಚ್ಚು ಲಾಭಾಂಶ ಘೋಷಿಸಿದೆ ಎಂದು ರಾಜ್ಯ ಪತ್ತಿನ ಸೌಹಾರ್ದ ಸಹಕಾರಿಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ತಿನ ಸೌಹಾರ್ದ ಸಹಕಾರಿಗಳ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷ ಸಂಜೀವಕುಮಾರ ಪಾಟೀಲ ಮಾತನಾಡಿದರು.
ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳ ಪೈಕಿ 521 ಅಂಕ ಗಳಿಸಿದ ವೈಷ್ಣವಿ ಮೋಹನ್ ಹಾಗೂ ಸಿಬಿಎಸ್ಸಿ ಪಠ್ಯಕ್ರಮದ 10ನೇ ತರಗತಿಯಲ್ಲಿ 500 ಅಂಕಗಳ ಪೈಕಿ 457 ಅಂಕ ಪಡೆದ ತಾಜಿನ್ ಉಬಯದುಲ್ಲಾಖಾನ್ ಅವರಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಉಪಾಧ್ಯಕ್ಷ ಅಶೋಕ ಗಿರಮಲ್, ನಿರ್ದೇಶಕರಾದ ನಾರಾಯಣರಾವ್ ಮುಖೇಡಕರ್, ಪಾಂಡುರಂಗ ಪಾಂಚಾಳ, ಗಣಪತಿ ಭೈರನಳ್ಳಿಕರ್, ಸಂಗೀತಾ ಗಣಾಧೀಶ್ವರ ಹಿರೇಮಠ, ಇಂದಿರಾ ಎಂ. ಪಾಟೀಲ, ಅರುಣ ಯಾದವರಾವ್, ಗುರಪ್ಪ ಸಿ. ಗಿರಿಮಲ್, ಸಂತೋಷ ಎನ್. ಸ್ವಾಮಿ, ರಮೇಶ ಮರೂರಕರ್ ಉಪಸ್ಥಿತರಿದ್ದರು.