ಮಂಡ್ಯ, ಸೆ.3- ಹಳೇ ಮೈಸೂರು ಭಾಗದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದು, ಜಿಲ್ಲೆಯ ಐದು ಸ್ಥಳೀಯ ಸಂಸ್ಥೆಗಳಲ್ಲಿ ಮಂಡ್ಯ ನಗರಸಭೆ ಸೇರಿದಂತೆ ನಾಲ್ಕು ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.
ಮಂಡ್ಯ ನಗರಸಭೆಯ 35 ಸ್ಥಾನಗಳ ಪೈಕಿ 18 ಜೆಡಿಎಸ್ ಪಾಲಾಗುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹತ್ತು ಸ್ಥಾನ ಕಾಂಗ್ರೆಸ್ಗಳಿಸಿದರೆ, ಐದು ಪಕ್ಷೇತರ ಹಾಗೂ ಎರಡು ಸ್ಥಾನ ಬಿಜೆಪಿ ಪಾಲಾಗಿದೆ.
11ನೇ ವಾರ್ಡ್ನಿಂದ ಬಿಜೆಪಿಯ ಅರುಣ್ಕುಮಾರ್ ಸತತ ಗೆಲುವು ಸಾಧಿಸಿದ್ದಾರೆ. 27ನೇ ವಾರ್ಡ್ನಿಂದ ಹಿರಿಯ ಕಾಂಗ್ರೆಸಿಗ ರಾಮಲಿಂಗಯ್ಯ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಜೆಡಿಎಸ್ಗೆ ಹೆಚ್ಚಿನ ಬಹುಮತ ನೀಡುವ ಮೂಲಕ ನಗರಸಭೆಯ ಅಧಿಕಾರ ನಡೆಸಲು ಅವಕಾಶ ನೀಡಿರುವುದಕ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಮದ್ದೂರು ಪುರಸಭೆಯ 23 ಕ್ಷೇತ್ರಗಳ ಪೈಕಿ ಜೆಡಿಎಸ್ 13ರಲ್ಲಿ ಜಯಗಳಿಸಿ ಸ್ಪಷ್ಟ ಬಹುಮತ ಗಳಿಸಿದೆ. ಕಾಂಗ್ರೆಸ್ 3, ಬಿಜೆಪಿ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, 6 ಮಂದಿ ಪಕ್ಷೇತರರು ಗೆದ್ದಿದ್ದಾರೆ.
20ನೇ ವಾರ್ಡ್ನ ಜೆಡಿಎಸ್ನ ಪಿ.ಆರ್.ಪ್ರಸನ್ನಕುಮಾರ್ ಅವಿರೋಧವಾಗಿ ಆಯ್ಕೆಯಾದರೆ, 8ನೇ ವಾರ್ಡ್ನಲ್ಲಿ ಪಕ್ಷೇತರ ಸದಸ್ಯೆ ರತ್ನ ಎಂ.ತಿಮ್ಮಯ್ಯ ಮತ್ತು ಜೆಡಿಎಸ್ನ ಡಿ.ಲತಾವೆಂಕಟೇಶ್ ಅವರು ತಲಾ 286 ಮತಗಳನ್ನು ಗಳಿಸಿದ್ದರಿಂದ ಸಮಬಲ Àಲಿತಾಂಶ ಬಂದಿತ್ತು. ಅಂತಿಮವಾಗಿ ಲಾಟರಿ ಹಾಕಿದಾಗ ರತ್ನ ಅವರಿಗೆ ಅದೃಷ್ಟ ಒಲಿದು ಆಯ್ಕೆಯಾಗಿದ್ದಾರೆ.
ಉಳಿದಂತೆ 12ನೇ ವಾರ್ಡ್ನಲ್ಲಿ ಜೆಡಿಎಸ್ನ ಎಚ್.ವಿ.ಸುಮಿತ್ರಾ ಅವರು ಕಾಂಗ್ರೆಸ್ನ ಭಾಗ್ಯ ಸತೀಶ್ ಅವರನ್ನು ಕೇವಲ 8ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪಾಂಡವಪುರ ಪುರಸಭೆಯ 23 ಕ್ಷೇತ್ರಗಳಲ್ಲಿ ಜೆಡಿಎಸ್ 18 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿದರೆ, ಕಾಂಗ್ರೆಸ್ 3 ಹಾಗೂ ಬಿಜೆಪಿ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಇತರರು ಒಂದು ಕ್ಷೇತ್ರದಲ್ಲಿ ಗೆದಿದ್ದಾರೆ.
ಇಡೀ ಜಿಲ್ಲೆಯಲ್ಲಿ ರೈತ ಸಂಘದಿಂದ ಪಾಂಡವಪುರ ಪುರಸಭೆಯ 25ನೇ ವಾರ್ಡ್ನಲ್ಲಿ ಟಿ.ಪಾರ್ಥಸಾರಥಿ ಆಯ್ಕೆಯಾಗುವ ಮೂಲಕ ಗೆಲುವು ಸಾಧಿಸಿದ್ದಾರೆ. ಉಳಿದಂತೆ 10 ಕ್ಷೇತ್ರಗಳಲ್ಲಿ ರೈತ ಸಂಘದ ಅಭ್ಯರ್ಥಿಗಳು ಜೆಡಿಎಸ್ಗೆ ಪೈಪೆÇೀಟಿ ನೀಡಿದ್ದಾರೆ.
ಪ್ರತಿಷ್ಠಿತ ನಾಗಮಂಗಲ ಪುರಸಭೆಯಲ್ಲಿ 23 ಕ್ಷೇತ್ರಗಳ ಪೈಕಿ ಜೆಡಿಎಸ್ 12 ಕ್ಷೇತ್ರಗಳನ್ನು ಗೆದಿದ್ದರೆ, ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಬಿಜೆಪಿ ಅಥವಾ ಇತರರು ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಒಂದು ಕ್ಷೇತ್ರದ ಅಂತರದಿಂದ ಕಾಂಗ್ರೆಸ್ ನಾಗಮಂಗಲ ಪುರಸಭೆಯ ಅಧಿಕಾರವನ್ನು ಕಳೆದುಕೊಂಡಿದೆ.
ಬೆಳ್ಳೂರು ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದ್ದು, 13 ಸ್ಥಾನಗಳ ಪೈಕಿ 7ರಲ್ಲಿ ಜಯ ಸಾಧಿಸಿದೆ. ಜೆಡಿಎಸ್ 4ರಲ್ಲಿ, ಪಕ್ಷೇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.