ಬೆಂಗಳೂರು,ಸೆ.3- ಬಿಬಿಎಂಪಿ ವ್ಯಾಪ್ತಿ ಸೇರಿದಂತೆ ರಾಜ್ಯದಲ್ಲಿನ ಕೆರೆ ಒತ್ತುವರಿ ತೆರವಿಗೆ ಕ್ರಮ ವಹಿಸುವುದಾಗಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಚಕ್ಷಣ ದಳಗಳನ್ನು ರಚಿಸಿ ಆ ಮೂಲಕ ಕೆರೆ ಒತ್ತುವರಿ ತೆರವಿಗೆ ಕ್ರಮ ವಹಿಸಲಾಗುವುದು. ಒಟ್ಟು ರಾಜ್ಯಾದ್ಯಂತ 36 ಸಾವಿರ ಕೆರೆಗಳಿದ್ದುಘಿ, 30 ಸಾವಿರ ಜೀವಂತ ಕೆರೆಗಳಾಗಿವೆ. ಕೆರೆ ಅಭಿವೃದ್ದಿ ಪ್ರಾಧಿಕಾರ ವ್ಯಾಪ್ತಿಗೆ ಈ ಕೆಲಸಗಳು ಬರಲಿದ್ದುಘಿ, ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಹಾಗೂ ಉಪಾಧ್ಯಕ್ಷರಾಗಿ ಸಣ್ಣ ನೀರಾವರಿ ಸಚಿವರು ಕಾರ್ಯ ನಿರ್ವಹಿಸುವರು. ಈ ಹಿನ್ನೆಲೆಯಲ್ಲಿ ಕೆರೆಗಳ ಒತ್ತುವರಿ ತೆರವು ಹಾಗೂ ಹೂಳೆತ್ತಲು ಕ್ರಮ ವಹಿಸಲಾಗುತ್ತಿದೆ ಎಂದು ಮಾನ್ಯತೆ ನೀಡಿದರು.
ಮೊದಲ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ 100 ಕೆರೆಗಳ ಹೂಳೆತ್ತಲು ಕೆರೆ ಸಂಜೀವಿನಿ ಯೋಜನೆಯಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ಯಶ್ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹೂಳು ತೆಗೆಯಲು ಉಚಿತವಾಗಿ ಯಂತ್ರೋಪಕರಣಗಳನ್ನು ನೀಡಲಾಗುತ್ತಿದ್ದುಘಿ, ರೈತರು ತಮ್ಮ ಹೊಲಗದ್ದೆಗಳಿಗೆ ಅಗತ್ಯವಿದ್ದರೆ ಹೂಳನ್ನು ಬಳಸಿಕೊಳ್ಳಬಹುದು ಎಂದರು.
ಕಾವೇರಿ ಕೊಳ್ಳದ ಬೆಳೆಗಳಿಗೆ ನೀರು ಬಿಡಲಾಗುವುದು. ಡಿಸೆಂಬರ್ ಅಂತ್ಯದಲ್ಲಿ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಕೆರೆಗಳ ನಡುವೆ ಸಂಪರ್ಕ ಕಲ್ಪಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಕೆ.ಸಿ.ವ್ಯಾಲಿ ನೀರು ಮಲಿನಗೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು 3ನೇ ಹಂತದಲ್ಲಿ ನೀರನ್ನು ಶುದ್ದಿಕರಿಸಲು ಆದೇಶ ನೀಡಿದ್ದಾರೆ. ಆದರೆ ಈ ವಿಚಾರ ನ್ಯಾಯಾಲಯದ ಮುಂದಿದ್ದು ಕೋರ್ಟ್ನ ಆದೇಶದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.
ಗಣೇಶ ವಿಸರ್ಜನೆಗೆ ಕೆರೆ ಬಳಸಬೇಡಿ:
ಕೆರೆಗಳ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಎಚ್ಚರಿಕೆ ವಹಿಸಬೇಕು. ಹಾಗಾಗಿ ಕೆರೆಗಳಲ್ಲಿ ಗಣೇಶ ವಿಸರ್ಜನೆಯನ್ನು ಮಾಡಬಾರದು ಎಂದರು.