ತುಮಕೂರು, ಸೆ.3- ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿಸಿದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಅತಂತ್ರಫಲಿತಾಂಶ ಬಂದಿದ್ದು, ಬಿಜೆಪಿ ಅತಿ ಹೆಚ್ಚು 12 ಸ್ಥಾನಗಳನ್ನು ಪಡೆದರೂ ಅಧಿಕಾರದ ಗದ್ದುಗೆಗೇರಲು ಸಾಧ್ಯವಾಗಿಲ್ಲ.
ಒಟ್ಟು 35 ವಾರ್ಡ್‍ಗಳ ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 12, ಜೆಡಿಎಸ್ 11, ಕಾಂಗ್ರೆಸ್ 9 ಹಾಗೂ ಪಕ್ಷೇತರರು 3 ಸ್ಥಾನಗಳನ್ನು ಪಡೆದಿದ್ದಾರೆ. ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು 17 ಸ್ಥಾನಗಳನ್ನು ಪಡೆಯಬೇಕಾಗಿದ್ದು, ಯಾರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಇಲ್ಲಿ ಮೈತ್ರಿ ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ಇಲ್ಲಿಯೂ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ತುಮಕೂರು ನಗರ ಸಭೆ ಇದ್ದಾಗಲೂ ಇಲ್ಲಿ ಅತಂತ್ರಫಲಿತಾಂಶ ಬಂದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿ ಸರ್ಕಾರ ರಚಿಸಿದ್ದು, ಜಿಲ್ಲೆಯಲ್ಲಿ ಒಟ್ಟು ಮೂರು ಸಚಿವರಿದ್ದು, . ಕಾಂಗ್ರೆಸ್‍ನಿಂದ ಇಬ್ಬರು, ಜೆಡಿಎಸ್‍ನಿಂದ ಒಬ್ಬರು ಸಚಿವರಿದ್ದ ತಮ್ಮ ಪಕ್ಷವನ್ನು ಗೆಲ್ಲಿಸಲು ಅಹರ್ನಿಶಿ ಶ್ರಮಿಸಿದ್ದರು. ಆದರೆ ಮತದಾರ ಪ್ರಭು ಯಾರಿಗೂ ಬಹುಮತ ನೀಡದೆ ಅತಂತ್ರಫಲಿತಾಂಶ ನೀಡಿದ್ದಾನೆ.
ಮಧುಗಿರಿ ಪುರಸಭೆ ಕಾಂಗ್ರೆಸ್ ಮಾನ ಉಳಿಸಿದರೆ, ಕೊರಟಗೆರೆಯಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿ ತಲುಪಿದೆ. ಮೈತ್ರಿಯಿಂದ ಲಾಭವಾಗುತ್ತದೆ ಎಂದು ನಿರೀಕ್ಷಿಸಿದ್ದ ಕಾಂಗ್ರೆಸ್‍ಗೆ ಜಿಲ್ಲೆಯಲ್ಲಿ ಮುಖಭಂಗವಾಗಿದೆ.
ಪಾಲಿಕೆಯಲ್ಲಿ ಕಾಂಗ್ರೆಸ್ ಗದ್ದುಗೆ ಹಿಡಿಯುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಪರಮೇಶ್ವರ್, ಮಾಜಿ ಶಾಸಕ ರಫೀಕ್ ಅಹ್ಮದ್ ಮತ್ತು ಇತರ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಜನರು 9 ಸ್ಥಾನಕ್ಕೆ ಕಾಂಗ್ರೆಸ್ಸನ್ನು ಸೀಮಿತಗೊಳಿಸಿದ್ದಾರೆ.
ಇನ್ನು ಜಿಲ್ಲಾ ಬಿಜೆಪಿ ಉಸ್ತುವಾರಿಯನ್ನು ವಿ.ಸೋಮಣ್ಣ ವಹಿಸಿಕೊಂಡಿದ್ದರು. ಪಾಲಿಕೆಯನ್ನು ಬಿಜೆಪಿ ತೆಕ್ಕೆಗೆ ತರಲು ಸಾಕಷ್ಟು ಶ್ರಮಿಸಿದ್ದರು.
ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಸಿ.ಚೆನ್ನಿಗಪ್ಪ ಮತ್ತು ಗ್ರಾಮಾಂತರ ಕ್ಷೇತ್ರದ ಡಿ.ಸಿ.ಗೌರಿಶಂಕರ್, ಗೋವಿಂದ ರಾಜು ಮತ್ತಿತರ ಘಟಾನುಘಟಿಗಳು ಕೂಡ ಶ್ರಮಿಸಿದ್ದರು.