ಅಹ್ಮದಾಬಾದ್: ಪಟೇಲ್ ಸಮುದಾಯದ ಮೀಸಲಾತಿ, ರೈತರ ಸಾಲಮನ್ನಾ, ಪಟೇಲ್ ಸಮುದಾಯಕ್ಕಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾರ್ದಿಕ್ ಪಟೇಲ್ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದೆ ಅವರ ದೇಹಾರೋಗ್ಯ ಕೂಡ ಕ್ಷೀಣಿಸುತ್ತಿದೆ.
ಇದೇ ಸಂದರ್ಭದಲ್ಲಿ ಅವರ ಆರೋಗ್ಯ ಕೂಡ ಕ್ಷೀಣಿಸುತ್ತಿದೆ. ನಿನ್ನೆ ಹಾರ್ದಿಕ್ ಪಟೇಲ್ ಅವರನ್ನು ಪರೀಕ್ಷೆಸಿದ ವೈದ್ಯರು ದೇಹದ ಪ್ರಮುಖ ಅಂಗಾಂಗಳ ಸಾಮರ್ಥ್ಯ ಕುಸಿಯುತ್ತಿದೆ ಎಂದು ಎಚ್ಚರಿಕೆ ನೀಡಿದ್ದರು.
ಇದರ ನಡುವೆಯೇ ಹೇಳಿಕೆ ಬಿಡುಗಡೆ ಮಾಡಿರುವ ಹಾರ್ದಿಕ್ ಪಟೇಲ್, ಉಪವಾಸ ಸತ್ಯಾಗ್ರಹ 9ನೇ ದಿನಕ್ಕೆ ಕಾಲಿಟ್ಟಿದೆ. ನಮ್ಮ ಹೋರಾಟ ಬಿಜೆಪಿ ಸರ್ಕಾರದ ವಿರುದ್ಧ. ಉಪವಾಸದಿಂದಾಗಿ ನನ್ನ ದೇಹಾರೋಗ್ಯ ಕ್ಷೀಣಿಸುತ್ತಿದೆ. ನನ್ನ ದೇಹದ ಪ್ರಮುಖ ಅಂಗಾಂಗಗಳ ಸಾಮರ್ಥ್ಯ ಕುಸಿದಿದೆ. ಒಂದು ವೇಳೆ ಈ ಹೋರಾಟದಲ್ಲಿ ನಾನು ಸತ್ತರೆ ನನ್ನ ಕಣ್ಣುಗಳನ್ನು ಅಂಧರಿಗೆ ದಾನ ಮಾಡಿ. ನನ್ನ ಬ್ಯಾಂಕ್ ಖಾತೆಯಲ್ಲಿ 50 ಸಾವಿರ ರೂಗಳಿದ್ದು, ಈ ಪೈಕಿ 30 ಸಾವಿರ ರೂಗಳನ್ನು ನನ್ನ ಕುಟುಂಬಕ್ಕೆ ನೀಡಿ. ಉಳಿದ 20 ಸಾವಿರ ರೂಗಳನ್ನು ಗೋಶಾಲೆಗೆ ನೀಡುವಂತೆ ಹಾರ್ದಿಕ್ ಪಟೇಲ್ ಮನವಿ ಮಾಡಿದ್ದಾರೆ.
ಹಾರ್ದಿಕ್ ಪಟೇಲ್ ಅವರ ಈ ಪತ್ರಿಕಾ ಪ್ರಕಟಣೆಯನ್ನು ಅವರ ಸಹವರ್ತಿ ಮನೋಜ್ ಪನಾರಾ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. ಅಂತೆಯೇ ಹಾರ್ದಿಕ್ ಬರೆದಿದ್ದ ಪುಸ್ತಕವೊಂದರ ಹಣಕೂಡ ತನ್ನ ಕುಟುಂಬಸ್ಥರಿಗೆ ನೀಡುವಂತೆ ಪ್ರಕಾಶಕರಿಗೆ ಹಾರ್ದಿಕ್ ಮನವಿ ಮಾಡಿದ್ದಾರೆ.