ಬೆಂಗಳೂರು, ಸೆ.3- ರಾಜ್ಯಾದ್ಯಂತ ಮೂರು ಮಹಾನಗರ ಪಾಲಿಕೆಗಳು ಸೇರಿದಂತೆ 105 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 31, ಬಿಜೆಪಿ 28, ಜೆಡಿಎಸ್ 13 ಸಂಸ್ಥೆಗಳನ್ನು ಗೆದ್ದುಕೊಂಡಿದ್ದು, 5 ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷೇತರರು ಪ್ರಾಬಲ್ಯ ಮೆರೆದಿದ್ದಾರೆ. ಉಳಿದ 28 ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಕಡೆ ಜೆಡಿಎಸ್-ಕಾಗ್ರೆಸ್ ನಡುವೆ ಮೈತ್ರಿ ಏರ್ಪಡುವ ಸನ್ನಿವೇಶ ಸೃಷ್ಟಿಯಾಗಿದೆ.
ಒಟ್ಟಾರೆ ಸೀಟುಗಳಿಕೆಯಲ್ಲಿ ಕಾಂಗ್ರೆಸ್ ಮುಂದೆ ಇದೆ. ಕೊಡಗು ಜಿಲ್ಲೆಯಲ್ಲಿ ಮಳೆ ಅನಾಹುತ ಕಾರಣಕ್ಕಾಗಿ ಸ್ಥಳೀಯ ಸಂಸ್ಥೆ ಚುನಾವಣೆ ಮುಂದೂಡಲಾಗಿದೆ. ಆ ಜಿಲ್ಲೆಯ 45 ಸ್ಥಾನಗಳನ್ನು ಹೊರತುಪಡಿಸಿ ಉಳಿದಂತೆ 2664 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ 982, ಬಿಜೆಪಿ 929, ಜೆಡಿಎಸ್ 371, ಪಕ್ಷೇತರರು 299, ಇತರೆ ಪಕ್ಷಗಳ 34 ಮಂದಿ ಆಯ್ಕೆಯಾಗಿದ್ದಾರೆ. ಬಿಎಸ್ಪಿ ಚಾಮರಾಜನಗರದಲ್ಲಿ 10, ಮೈಸೂರಿನಲ್ಲಿ 2, ಕಲಬುರ್ಗಿಯಲ್ಲಿ 1 ಸ್ಥಾನ ಸೇರಿ 13 ಸ್ಥಾನಗಳನ್ನು ಗೆದ್ದುಗೊಂಡಿದೆ.
ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಮಾತ್ರ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದ್ದು, ತುಮಕೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳು ಅತಂತ್ರವಾಗಿವೆ.
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 12 ಸ್ಥಳೀಯ ಸಂಸ್ಥೆಗಳಿದ್ದು, ಅದರಲ್ಲಿ ಬಿಜೆಪಿ ಬಾಗಲಕೋಟೆ, ಇಳಕಲ್, ರಬಕವಿಬನಹಟ್ಟಿ ನಗರಸಭೆಗಳನ್ನು, ಮಹಾಲಿಂಗಪುರ ಪುರಸಭೆ ಮತ್ತು ಬೀಳಗಿ ಪಟ್ಟಣ ಪಂಚಾಯ್ತಿಯನ್ನು ಸ್ಪಷ್ಟ ಬಹುಮತದೊಂದಿಗೆ ಗೆದ್ದುಕೊಂಡಿದೆ.
ಕಾಂಗ್ರೆಸ್ ಜಮಖಂಡಿ ನಗರಸಭೆ, ಗುಳೇದಗುಡ್ಡ ಹಾಗೂ ಹುನಗುಂದ ಪುರಭೆಗಳನ್ನು ಗೆದ್ದುಕೊಂಡಿದೆ. ಉಳಿದಂತೆ ಮುಧೋಳ, ತೆರೆದಾಳ ಮತ್ತು ಕೇರೂರು ಸ್ಥಳೀಯ ಸಂಸ್ಥೆಗಳು ಅತಂತ್ರವಾಗಿವೆ.
ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ಪಾಲಾಗಿದೆ. ಕೊತ್ತೂರು ಪಟ್ಟಣ ಪಂಚಾಯ್ತಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿಯ 14 ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ 3, ಕಾಂಗ್ರೆಸ್ 4, ಪಕ್ಷೇತರರು 5 ಸಂಸ್ಥೆಗಳನ್ನು ಗೆದ್ದುಕೊಂಡಿದ್ದು, ಎರಡರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ರಾಮದುರ್ಗ, ಸವದತ್ತಿ, ಸದಲಗ ಸಂಸ್ಥೆಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ ಬೈಲಹೊಂಗಲ, ಕುಡಚಿ, ಹುಕ್ಕೇರಿ, ರಾಯಭಾಗ ಸಂಸ್ಥೆಗಳನ್ನು ಗೆದ್ದುಕೊಂಡಿದೆ. ಗೋಕಾಕ್, ನಿಪ್ಪಾಣಿ, ಚಿಕ್ಕೋಡಿ, ಕಣ್ಣೂರು, ಖಾನಾಪುರ ಸಂಸ್ಥೆಗಳಲ್ಲಿ ಪಕ್ಷೇತರರು ಪ್ರಾಬಲ್ಯ ಮೆರೆದಿದ್ದು, ಎಂಇಎಸ್ ಅಧಿಪತ್ಯ ಹಿಡಿದಿದೆ. ಸಂಕೇಶ್ವರ ಮತ್ತು ಮೂಡಲಗಿ ಸಂಸ್ಥೆಗಳು ಅಂತ್ರವಾಗಿವೆ.
ಬೀದರ್ ಜಿಲ್ಲೆಯ ಹಳ್ಳಿಕೇಡ ಪುರಸಭೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಎರಡು ಸ್ಥಳೀಯ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಚಾಮರಾಜನಗರಸಭೆಯಲ್ಲಿ ಬಿಜೆಪಿ 31ರಲ್ಲಿ 15 ಸ್ಥಾನಗಳಿಸಿದರೆ, ಕಾಂಗ್ರೆಸ್ 8, ಬಿಎಸ್ಪಿ 1, ಪಕ್ಷೇತರರು 1 ಹಾಗೂ ಇತರೆ 6 ಮಂದಿ ಆಯ್ಕೆಯಾಗಿದ್ದಾರೆ. ಕೊಳ್ಳೇಗಾಲ ನಗರಸಭೆಯಲ್ಲಿ ಕಾಂಗ್ರೆಸ್ 11 ಸ್ಥಾನಗೆದ್ದಿದ್ದರೆ, ಬಿಎಸ್ಪಿ 9 ಸ್ಥಾನಗಳನ್ನು ಗೆದ್ದಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿರುವ ಮೂರು ಸಂಸ್ಥೆಗಳ ಪೈಕಿ ಚಿತ್ರದುರ್ಗ ಮತ್ತು ಹೊಸದುರ್ಗ ಎರಡನ್ನು ಬಿಜೆಪಿ ಗೆದ್ದುಕೊಂಡಿದ್ದು, ಕಾಂಗ್ರೆಸ್ ಚಳ್ಳಕೆರೆಯಲ್ಲಿ ಮಾತ್ರ ಹಿಡಿತ ಸಾಧಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ 3 ಸ್ಥಳೀಯ ಸಂಸ್ಥೆಗಳ ಪೈಕಿ ಪುತ್ತೂರು ಬಿಜೆಪಿ ಪಾಲಾಗಿದೆ. ಉಳಿದಂತೆ ಉಲ್ಲಾಳ ಮತ್ತು ಭಂಟ್ವಾಳ ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಶಾಮನೂರು ಶಿವಶಂಕರಪ್ಪ ಅವರ ಪ್ರಭಾವ ಇರುವ ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಮೂರು ಸ್ಥಳೀಯ ಸಂಸ್ಥೆಗಳ ಪೈಕಿ ಚನ್ನಗಿರಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರೆ, ಹೊನ್ನಾಳಿ ಮತ್ತು ಜಗಳೂರು ಸಂಸ್ಥೆಗಳು ಬಿಜೆಪಿ ಪಾಲಾಗಿವೆ.
ಗದಗ ಜಿಲ್ಲೆಯಲ್ಲಿ ಗಜೇಂದ್ರಗಡ, ನೀರಗಲ್ ಬಿಜೆಪಿ ಪಾಲಾದರೆ, ರೋಣ, ನರಗುಂದ, ಶಿರಹಟ್ಟಿ ಕಾಂಗ್ರೆಸ್ ಪಾಲಾಗಿವೆ. ಲಕ್ಷ್ಮೀಶ್ವರದಲ್ಲಿ ಅತಂತ್ರ ಸ್ಥಿತಿ ಇದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ತವರೂರು ಹಾಸನದ 5 ಸ್ಥಳೀಯ ಸಂಸ್ಥೆಗಳ ಪೈಕಿ ಅರಸೀಕೆರೆ, ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ ಸಂಸ್ಥೆಗಳು ಜೆಡಿಎಸ್ ಪಾಲಾಗಿವೆ. ಹಾಸನದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಹಾವೇರಿ, ರಾಣೇಬೆನ್ನೂರು, ಹಿರೆಕೆರೂರು ಸಂಸ್ಥೆಗಳಲ್ಲಿ ಅತಂತ್ರ ಸ್ಥಿತಿ ಇದೆ. ಹಾನಗಲ್, ಶವಣೂರು ಸಂಸ್ಥೆಗಳು ಕಾಂಗ್ರೆಸ್ ಪಾಲಾಗಿವೆ. ಈ ಜಿಲ್ಲೆಯಲ್ಲಿ ಕೆ.ಬಿ.ಕೋಳಿವಾಡ್, ಬಿ.ಸಿ.ಪಾಟೀಲ್ ಅವರ ನಿರಾಸಕ್ತಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎದ್ದುಕಾಣುತ್ತಿದೆ.
ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನಖರ್ಗೆ ಅವರ ಕರ್ಮಭೂಮಿ ಕಲಬುರಗಿಯಲ್ಲಿ ಶಹಬಾದ್, ಚಿತ್ತಾಪುರ, ಚಿಂಚೋಳಿ, ಅಫ್ಜಲ್ಪುರ ಸಂಸ್ಥೆಗಳು ಕಾಂಗ್ರೆಸ್ ಪಾಲಾಗಿವೆ. ಸೇಡಂ, ಜೇವರ್ಗಿ ಬಿಜೆಪಿ ಗೆದ್ದುಕೊಂಡರೆ ಅಳಂದ ಅತಂತ್ರವಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ ಮತ್ತು ಕುಷ್ಠಗಿಯನ್ನು ಕಾಂಗ್ರೆಸ್ ಗೆದ್ದುಕೊಂಡರೆ, ಯಲಬುರ್ಗವನ್ನು ಬಿಜೆಪಿ ಗೆದ್ದುಕೊಂಡಿದೆ. ಕೊಪ್ಪಳದಲ್ಲಿ ಅತಂತ್ರ ಸ್ಥಿತಿ ಇದೆ.
ಮಂಡ್ಯ ಜಿಲ್ಲೆಯಲ್ಲಿ ಬೇಲೂರು ಪಟ್ಟಣ ಪಂಚಾಯ್ತಿಯನ್ನು ಕಾಂಗ್ರೆಸ್ ಗೆದ್ದುಕೊಂಡರೆ, ಉಳಿದಂತೆ ಮಂಡ್ಯ, ಮದ್ದೂರು, ಪಾಂಡವಪುರ, ನಾಗಮಂಗಲ ಸಂಸ್ಥೆಗಳು ಜೆಡಿಎಸ್ ಪಾಲಾಗಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಅತಂತ್ರ ಸ್ಥಿತಿಗೆ ತಲುಪಿದೆ. ಮೈಸೂರು ಮಹಾನಗರ ಪಾಲಿಕೆ ಅತಂತ್ರವಾಗಿದ್ದು, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರ ಟಿ.ನರಸೀಪುರ ಪುರಸಭೆ, ಎಚ್.ಡಿ.ಕೋಟೆ ಪುರಸಭೆ ಅತಂತ್ರವಾಗಿದ್ದರೆ, ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಗೆದ್ದಿದೆ.
ರಾಯಚೂರು ಜಿಲ್ಲೆಯ 7 ಸಂಸ್ಥೆಗಳ ಪೈಕಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿದೆ. ಉಳಿದಂತೆ ರಾಯಚೂರು, ದೇವದುರ್ಗ, ಮಾನ್ವಿ ಸ್ಥಳೀಯ ಸಂಸ್ಥೆಗಳು ಅತಂತ್ರವಾಗಿವೆ. ಸಿಂಧನೂರು, ಲಿಂಗಸೂರು, ಮುದಗಲ್, ಹಟ್ಟಿ ಸಂಸ್ಥೆಗಳು ಕಾಂಗ್ರೆಸ್ ಪಾಲಾಗಿದ್ದು, ಬಿಜೆಪಿ ನೆಲಕಚ್ಚಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಪರಮೇಶ್ವರ್ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಕಾಂಗ್ರೆಸ್ ನೆಲಕಚ್ಚಿದ್ದು, ಸ್ವತಃ ಪರಮೇಶ್ವರ್ ಆಯ್ಕೆಯಾಗಿರುವ ಕೊರಟಗೆರೆ ಪಟ್ಟಣ ಪಂಚಾಯ್ತಿಯೇ ಜೆಡಿಎಸ್ ಪಾಲಾಗಿದೆ. ತುಮಕೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಿದ್ದು, ಯಾರಿಗೂ ಸ್ಪಷ್ಟ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಕ್ಷೇತ್ರ ಮಧುಗಿರಿಯಲ್ಲಿ ಮಾತ್ರ ಕಾಂಗ್ರೆಸ್ ಜೀವ ಉಳಿಸಿಕೊಂಡಿದ್ದು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ ಸಂಸ್ಥೆಗಳು ಜೆಡಿಎಸ್ ಪಾಲಾಗಿವೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಉಡುಪಿ ನಗರಸಭೆ, ಕುಂದಾಪುರ ಪರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯ್ತಿ ಬಿಜೆಪಿ ಪಾಲಾಗಿದೆ. ಇಲ್ಲಿ ಕಾಂಗ್ರೆಸ್ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ.
ಉತ್ತರ ಕನ್ನಡ ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳಲ್ಲಿ ಶಿರಸಿ, ಕುಮುಟಾ, ಮುಂಡಗೋಡ್ ಸಂಸ್ಥೆಗಳು ಬಿಜೆಪಿ ಪಾಲಾಗಿದ್ದು, ದಾಂಡೇಲಿ, ಹಳಿಯಾಳ, ಯಲ್ಲಾಪುರ ಸಂಸ್ಥೆಗಳು ಕಾಂಗ್ರೆಸ್ ಪಾಲಿಗೆ ಬಂದಿವೆ. ಕಾರವಾರ, ಅಂಕೋಲದಲ್ಲಿ ಅತಂತ್ರ ಸ್ಥಿತಿ ಇದೆ.
ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಪುರಸಭೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬರದೆ ಅತಂತ್ರ ಸ್ಥಿತಿಯಲ್ಲಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ಮತ್ತು ಸೋಲಾಪುರ ನಗರಸಭೆಗಳು ಬಿಜೆಪಿ ಪಾಲಾದರೆ, ಗುರುಮಿಟ್ಕಲ್ ಪಟ್ಟಣ ಪಂಚಾಯ್ತಿಯನ್ನು ಕಾಂಗ್ರೆಸ್ ಉಳಿಸಕೊಂಡಿದೆ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇನ್ನಷ್ಟು ಕ್ಷೇತ್ರಗಳನ್ನು ಗೆಲ್ಲುವ ಅವಕಾಶಗಳಿದ್ದರೂ ಕಾಂಗ್ರೆಸ್ ವಲಯದಲ್ಲಿರುವ ಅತೃಪ್ತಿ ಮತ್ತು ಅಸಮಾಧಾನಗಳು ಸೋಲಿಗೆ ಕಾರಣವಾಗಿದೆ.