ನಮ್ಮ ಸರ್ಕಾರವನ್ನ ರಾಜ್ಯದ ಜನ ಬೆಂಬಲಿಸಿದ್ದಾರೆ: ಸಿಎಂ ಸಂತಸ

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಜನ ಸಂಪೂರ್ಣ ಸಹಮತ ನೀಡಿದ್ದಾರೆ. ನಮ್ಮ ಸರ್ಕಾರವನ್ನ ರಾಜ್ಯದ ಜನ ಬೆಂಬಲಿಸಿದ್ದಾರೆ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದರು.

ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು,ನಾವು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಾಗಿ ಪ್ರಚಾರ ಮಾಡಲಿಲ್ಲ. ಬಿಜೆಪಿಯವರು ತಂಡ ರಚಿಸಿಕೊಂಡು ಪ್ರಚಾರ ಮಾಡಿದರು. ಬಿಜೆಪಿ ನಗರಪ್ರದೇಶದಲ್ಲಿ ಮುಂದಿದೆ ಎನ್ನುತ್ತಿದ್ದರು. ಆದರೇ ಬಿಜೆಪಿ ನಗರ ಪ್ರದೇಶಗಳಲ್ಲಿ ಹಿನ್ನಡೆ ಅನುಭವಿಸಿದೆ ಎಂದರು.

ನಗರ ಪ್ರದೇಶದ ಜನತೆಗೆ ಬಿಜೆಪಿ ಕಡೆಗೆ ಹೆಚ್ಚಿನ ಒಲವು ಇದೆ ಎನ್ನುವ ಭಾವನೆ ಮೊದಲಿನಿಂದಲೂ ಇದೆ. ಆದರೆ ಇದೀಗ ನಗರ ಪ್ರದೇಶದಲ್ಲೂ ಬಿಜೆಪಿ ಒಲವು ಕಡಿಮೆ ಆಗುತ್ತಿದೆ ಎಂದು ಇವತ್ತಿನ ಫಲಿತಾಂಶದ ಮೂಲಕ ಪರಾಮರ್ಶಿಸಬಹುದು ಎಂದು ಹೇಳಿದರು.

ಬಿಜೆಪಿ ನಾಯಕರು ಸರ್ಕಾರ ಇದ್ಯಾ, ಉತ್ತರ ಕರ್ನಾಟಕ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸಮ್ಮಿಶ್ರ ಸರ್ಕಾರವನ್ನ ಅಭದ್ರ ಸರ್ಕಾರ ಎಂಬ ಭಾವನೆ ಮೂಡಿಸಲು ಹೊರಟಿದ್ದಾರೆ. ಆದರೆ ಜನರು ನಮಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

ನಾವು ಜಿಲ್ಲಾವಾರು ಪ್ರವಾಸ ಮಾಡಲಿಲ್ಲ.ಜನರಲ್ಲಿ ಮನವಿ ಮಾಡಿದ್ದೇವೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಸಹಮತ ನೀಡಿದ್ದಾರೆ ಎಂದರು.

100 ದಿನಗಳ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮೈತ್ರಿ ಸರ್ಕಾರದ ಆಡಳಿತವನ್ನು ಜನತೆ ಬೆಂಬಲಿಸಿದ್ದಾರೆ. ಮತದಾರರರಿಗೆ ನಾನು ಗೌರವಪೂರ್ವ ವಂದನೆಗಳನ್ನು ಎರಡು ಪಕ್ಷದ ಪರವಾಗಿ ಸಲ್ಲಿಸಲು ಬಯಸುತ್ತೇನೆ.

ಮುಖಂಡರು ನಿರ್ಧರಿಸುತ್ತಾರೆ:
ಚುನಾವಣಾ ಫಲಿತಾಂಶದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವ ಕಡೆ ಗೊಂದಲ ಪ್ರಶ್ನೆಯೇ ಇಲ್ಲ. ಅಲ್ಲಿನ ಕಾಂಗ್ರೆಸ್ –ಜೆಡಿಎಸ್ ನಾಯಕರು ನಿರ್ಧರಿಸುತ್ತಾರೆ ಎಂದು ಸಿಎಂ ಸ್ಪಷ್ಟನೆ ನೀಡಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವುದಕ್ಕೆ ಪ್ರಯತ್ನಿಸುತ್ತೇವೆ. ಬಿಜೆಪಿಯವರು ದೊಡ್ಡ ಕನಸು ಕಾಣುತ್ತಿದ್ದಾರೆ ಒಳ್ಳೆಯದಾಗಲಿ ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಉತ್ತರ ಕರ್ನಾಟಕಕ್ಕೆ ಪ್ರವಾಸಕ್ಕೆ ಹೋಗಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಬಿಎಸ್‍ವೈ ಯಾವ ಯಾವ ಜಿಲ್ಲೆಗೆ ಪ್ರವಾಸಕ್ಕೆ ಹೋಗಿದ್ದರು, ಅದನ್ನ ಹೇಳ್ತಿನಿ. ಎಲ್ಲಾ ದಾಖಲೆಗಳನ್ನ ಇಡುತ್ತೇನೆ ಎಂದು ಅವರಿಗೆ ತಿರುಗೇಟು ನೀಡಿದರು.

ಯಡಿಯೂರಪ್ಪ, ಡಿವಿಎಸ್ ಹಾಗೂ ಜಗದೀಶ್​ ಶೆಟ್ಟರ್ ಸಿಎಂ ಆಗಿದ್ದಾಗ ಮೊದಲ ನೂರು ದಿನಗಳಲ್ಲಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ. ನಾನು ಎಲ್ಲೆಲ್ಲಿ ಪ್ರವಾಸ ಮಾಡಿದ್ದೇನೆ ದಾಖಲೆ ಇಡುತ್ತೇನೆ ಎಂದರು.

ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಅಧಿಕಾರಿಗಳು ಕೆಲಸ ಮಾಡದೇ ಇರಲಿ ಎಂದು ಹೀಗೆ ಹೇಳಿಕೆ ಕೊಡ್ತಿದ್ದಾರೆ. ಆದ್ರೆ ಅಧಿಕಾರಿಗಳಿಗೆ ಚಾಟಿ ಬೀಸೋದು ನಮಗೆ ಗೊತ್ತು. ಯಡಿಯೂರಪ್ಪ ಶ್ವೇತ ಪತ್ರ ಹೊರಡಿಸಿ ಎನ್ನುತ್ತಿದ್ದಾರೆ. ಅವರಿಗೆ ಕೇಸರಿ ಪತ್ರ ಬೇಕಾದ್ರು ಹೊರಡಿಸ್ತೇವೆ. ಸರ್ಕಾರದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗಿದೆ ಎಂದರು.

ಇನ್ನು ಜಾರಕಿಹೊಳಿ ಸಹೋದರರ ಬಗ್ಗೆ ಮಾತನಾಡಿದ ಸಿಎಂ, ಬೆಳಗಾವಿ ರಾಜಕಾರಣವೇ ಬೇರೆ. ಜಾರಕಿಹೊಳಿ ಸಹೋದರರು ಮೊದಲಿನಿಂದಲೂ ಪಕ್ಷೇತರ ಶೈಲಿಯಲ್ಲೇ ಚುನಾವಣೆ ಎದುರಿಸಿ ಗೆದ್ದು ಬರುತ್ತಿದ್ದಾರೆ. ‌ಆದರೆ ಜಾರಕಿಹೊಳಿ ಸಹೋದರರ ಪೈಕಿ ರಮೇಶ್ ಜಾರಕಿಹೊಳಿ ಸಚಿವರಾಗಿದ್ದಾರೆ‌‌. ಆದರೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂದು ಬಿಜೆಪಿ ನಾಯಕರು ಪಟ್ಟಿ ಹಿಡಿದುಕೊಂಡು ಕನಸು ಕಾಣುತ್ತಿದ್ದಾರೆ. ಅವರ ಯಾವ ಪಟ್ಟಿಯೂ ಸಹಜವಲ್ಲ. ಬಿಜೆಪಿಯವರ ಕನಸು ನನಸಾಗಲ್ಲ ಎಂದು ಲೇವಡಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ