ಬೆಂಗಳೂರು, ಸೆ.2- ಛಲದಿಂದ ಬದುಕಬೇಕು, ಇತರರೂ ಬದುಕಲು ನೆರವಾಗಬೇಕೆಂಬ ಮನೋಭಾವ ಒಬ್ಬ ಸ್ತ್ರೀಗೆ ಇರುತ್ತದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಟಿ ತಾರಾ ಅನುರಾಧಾ ಹೇಳಿದರು.
ನಗರದ ಗಾಂಧಿಭವನದಲ್ಲಿ ಲೇಖಕಿ ಪಲ್ಲವಿ ಇಡೂರು ಅವರ ಜೊಲಾಂಟಾ ಎಂಬ ಕಥಾಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಲ್ಲ ಹೆಣ್ಣು ಮಕ್ಕಳು ಈ ಪುಸ್ತಕದಲ್ಲಿನ ಅಂಶಗಳನ್ನು ಅಳವಡಿಸಿಕೊಂಡು ಆದರ್ಶವಾಗಿ ಬದುಕಬೇಕೆಂದು ಹೇಳಿದರು.
ಸಾಹಿತ್ಯ ಮತ್ತು ಕಲೆಗೆ ಯಾವುದೇ ಜಾತಿ, ಭೇದ, ಪಕ್ಷಗಳ ಮಿತಿ ಇರುವುದಿಲ್ಲ. ಎಲ್ಲೆಗಳನ್ನು ಮೀರಿದ್ದೇ ಪ್ರತಿಭೆಯಾಗಿರುತ್ತದೆ. ಪ್ರತಿಯೊಬ್ಬ ಮಹಿಳೆಯ ಸಾಧನೆ ಹಿಂದೆ ಆಕೆಯ ಕುಟುಂಬ ಬಹುಮುಖ್ಯ ಕಾರಣವಾಗಿರುತ್ತದೆ ಎಂದ ಅವರು, ಹಲವಾರು ಹೆಣ್ಣು ಮಕ್ಕಳಿಗೆ ಪುಸ್ತಕ ಮಾದರಿಯಾಗಲಿ, ಸಾಧನೆ ಮಾಡುವ ಹೆಣ್ಣು ಮಕ್ಕಳಿಗೆ ಸ್ಫೂರ್ತಿಯಾಗಲಿ ಎಂದು ಆಶಿಸಿದರು.
ದಂತವೈದದ್ಯ ನಾಗಲಕ್ಷ್ಮಿ ಮಾತನಾಡಿ, ರಾಜಕೀಯದಲ್ಲಾಗಲಿ, ಇತರೆ ಕ್ಷೇತ್ರದಲ್ಲಾಗಲಿ ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದರೆ ಆಕೆ ತನ್ನ ಶಕ್ತಿಯನ್ನು ಕೆಲಸದ ಮೂಲಕ ದಾಖಲಿಸುತ್ತಾಳೆ. ಸ್ತ್ರೀಗೆ ಜಗತ್ತನ್ನು ಬದಲಾಯಿಸುವ ವಿಶೇಷ ಶಕ್ತಿ ಇರುತ್ತದೆ ಎಂದು ಹೇಳಿದರು.
ಸಮಾನತೆ ಎಂಬುದು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಅದಕ್ಕೆ ಅರ್ಥ ಸಿಗುತ್ತದೆ. ನಮ್ಮ ದೇಶದ ಗ್ರಂಥಾಲಯದಲ್ಲಿ ಯಾವತ್ತು ಸಾಲಾಗಿ ನಿಲ್ಲುತ್ತಾರೋ ಅಂದು ನಮ್ಮ ದೇಶ ಮುಂದುವರಿದಂತೆ ಎಂದರು.
ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಜೊಲಾಂಟಾ ಅಂತಹವರ ಬದುಕು ಎಲ್ಲ ಕಾಲಕ್ಕೂ ಆದರ್ಶನೀಯ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಿ ಸ್ವಾವಲಂಬಿಗಳನ್ನಾಗಿ ಮಾಡಬೇಕೆಂದು ಹೇಳಿದರು.
ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ನೆನಪಿಸಿಕೊಳ್ಳುವುದೇ ಕಷ್ಟದ ಸಂದರ್ಭದಂತಿದೆ. ಹಾಗಾಗಿ ಜೊಲಾಂಟಾ ಯುವ ಪೀಳಿಗೆಯ ಬದಲಾವಣೆಗೆ ನಾಂದಿಯಾಗಲಿ ಎಂದು ತಿಳಿಸಿದರು.
ಹಿರಿಯ ಪತ್ರಕರ್ತೆ ಜ್ಯೋತಿ ಇರ್ವತ್ತೂರು, ಸಾಹಿತಿಗಳಾದ ಚಕ್ರವರ್ತಿ ಚಂದ್ರಚೂಡ್, ಬಿ.ಎಸ್.ಸತ್ಯ, ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.