ಮೀಸಲಾತಿ ಪ್ರಕಟಗೊಂಡ ಬಳಿಕ ಮೇಯರ್ ಆಯ್ಕೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆ.2- ಮೇಯರ್ ಆಯ್ಕೆ ಸಂಬಂಧ ಇನ್ನೂ ಅಧಿಕೃತವಾಗಿ ಮೀಸಲಾತಿ ಹೊರಬಿದ್ದಿಲ್ಲ. ಮೀಸಲಾತಿ ಪ್ರಕಟಗೊಂಡ ನಂತರ ಎಲ್ಲರ ಸಹಮತದೊಂದಿಗೆ ಮೇಯರ್ ಆಯ್ಕೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಲೋಕಸಭೆ ಚುನಾವಣೆ ಕುರಿತು ಕಾಂಗ್ರೆಸ್ ನಾಯಕರು ಇಂದು ನಡೆಸಿದ ಸಭೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಬಿಬಿಎಂಪಿಯಲ್ಲಿ ಅಧಿಕಾರ ನಡೆಸುತ್ತಿದ್ದೇವೆ. ಅದು ಮುಂದುವರಿಯಲಿದೆ. ಮೇಯರ್ ಅಭ್ಯರ್ಥಿ ಆಯ್ಕೆ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.

ಮೇಯರ್ ಆಯ್ಕೆ ಮೀಸಲಾತಿ ಹೊರಬಿದ್ದ ಮೇಲೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು. ನಗರ ಶಾಸಕರು, ಸಂಸದರು, ಬಿಬಿಎಂಪಿ ಸದಸ್ಯರು ಎಲ್ಲರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮುಂದಿನ ವಾರದಲ್ಲಿ ಪ್ಯಾನಲ್ ಲೀಸ್ಟ್ ತಯಾರಿಸಿ ಹೈಕಮಾಂಡ್‍ಗೆ ಕಳುಹಿಸಿಕೊಡಲಿದ್ದೇವೆ. ಹೈಕಮಾಂಡ್ ಆಯ್ಕೆ ಅಂತಿಮಗೊಳಿಸಲಿದೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಆಯ್ಕೆ ಸಂಬಂಧ ಎಲ್ಲ ಜಿಲ್ಲಾ ಮುಖಂಡರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಪ್ಯಾನಲ್ ಮಾಡಿ ಹೈಕಮಾಂಡ್‍ಗೆ ಸದ್ಯದಲ್ಲೇ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ