ಬೆಂಗಳೂರು, ಸೆ.2-ಐದು ದಶಕಗಳ ಹಿಂದೆ ಸರ್ಕಾರ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿರುವ 750 ಕುಟುಂಬಗಳಿಗೆ ಪಡಿತರ ಚೀಟಿ, ವಿದ್ಯುತ್ ಸಂಪರ್ಕ ನೀಡಿದ್ದರೂ ಖಾತೆ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಎಂ.ಬಿ.ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದರು.
ಮಾಗಡಿ ರಸ್ತೆ ಮಾಚೋಹಳ್ಳಿ ಕಾಲೋನಿಯಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಅವರು, 94ಸಿಸಿ ಅಡಿಯಲ್ಲಿ ಖಾತೆಗಾಗಿ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದಿವೆ. ತಹಶೀಲ್ದಾರ್ ಗ್ರಾಮಸಭೆಗೆ ಹಾಜರಾಗುತ್ತಾರೆ. ಅವರಲ್ಲಿ ತಮ್ಮ ಸಮಸ್ಯೆ ನಿವೇದಿಸಿಕೊಳ್ಳಲು ನೂರಾರು ಫಲಾನುಭವಿಗಳು ಬಂದಿದ್ದಾರೆ. ಇವರ ಸಮಸ್ಯೆ ಕೇಳುವವರು ಯಾರು ಎಂದು ಪ್ರಶ್ನಿಸಿದರು.
ಪಹಣಿಯಲ್ಲಿ ಇಂದಿಗೂ ಸರ್ಕಾರಿ ಜಾಗ ಎಂದೇ ತೋರಿಸುತ್ತಿದ್ದು, ಆರ್.ಟಿ.ಸಿ ಇಲ್ಲದ ಕಾರಣ ಮನೆ ಹೊಂದಿರುವ ಯಾರಿಗೂ ಖಾತೆ ಮಾಡಿಕೊಡಲು ಆಗುತ್ತಿಲ್ಲ. ಅವರ ಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂದರು.
ವರ್ಷಕ್ಕೊಮ್ಮೆ ನಡೆಯುವ ಗ್ರಾಮಸಭೆಗೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಮುಖ್ಯಸ್ಥರು, ಶಾಸಕರು, ಜಿ.ಪಂ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಸದರು, ಸಚಿವರು, ಹಾಜರಾಗಿ ಜನರ ಸಮಸ್ಯೆ ಆಲಿಸಿದರೆ ಪರ್ಯಾಯ ಮಾರ್ಗ ಕಂಡುಕೊಳ್ಳಬಹುದು.
ಗ್ರಾಮಪಂಚಾಯತಿ ಅಧ್ಯಕ್ಷೆ ಬಿ.ಆರ್.ಅನ್ನಪೂರ್ಣೇಶ್ವರಿಮುರಳಿ ಮಾತನಾಡಿ, ಸ್ವಾತಂತ್ರ್ಯ ಬಂದ 25 ವರ್ಷದ ಸವಿನೆನಪಿಗಾಗಿ ಅಂದಿನ ಸರ್ಕಾರ 1972ರಲ್ಲಿ ಸೂರಿಲ್ಲದ ಪ್ರತಿಯೊಬ್ಬರಿಗೂ ನಿವೇಶನ ನೀಡಿದ್ದರೂ ಇಲ್ಲಿಯವರೆಗೂ ಅವರಿಗೆ ಸ್ವಾಧೀನಪತ್ರ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ, ವಿಭಾಗಾಧಿಕಾರಿ ಹಲವಾರು ಅಧಿಕಾರಿಗಳು ಬಂದು ಹೋಗಿದ್ದರೂ ಬಡವರಿಗೆ ಖಾತೆ ಮಾಡಿಕೊಟ್ಟಿಲ್ಲ. ನಿಜವಾಗಿಯೂ ಬಡವರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ನುಡಿದರು.
ಮಾಚೋಹಳ್ಳಿ ಗ್ರಾ.ಪಂ.ನ ಹಲವು ಹಳ್ಳಿಗಳಲ್ಲಿ ನೂರಕ್ಕೂ ಹೆಚ್ಚು ರೆವಿನ್ಯೂ ಬಡಾವಣೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಪಂಚಾಯಿತಿಯಿಂದ ಅಲ್ಲಿನ ನಿವಾಸಿಗಳಿಗೆ ಸೌಕರ್ಯ ಮಾತ್ರ ಕೊಡಬೇಕು, ಅವರಿಂದ ಯಾವುದೇ ರೀತಿಯ ತೆರಿಗೆ ಭರಿಸಲು ಸಾಧ್ಯವಾಗುತ್ತಿಲ್ಲ . ಅಲ್ಲದೆ ನಿವೇಶನ ಮಾಲೀಕರೂ ಕೂಡ ತೆರಿಗೆಯನ್ನು ಕಟ್ಟಿಲ್ಲ ಎಂದು ಪಕ್ಷಬೇಧ ಮರೆತು ಪಂಚಾಯತಿ ಸದಸ್ಯರು ಹೇಳಿದರು.
ಸರ್ಕಾರ ಬಡವರಿಗೆ ಉಚಿತವಾಗಿ ಪಡಿತರ ನೀಡುತ್ತಿದೆ. ಅಂಗಡಿ ಮಾಲೀಕರು ಹೆಬ್ಬೆಟ್ಟು ಕೊಡಬೇಕಾದರೆ ರೂ.40 ಕೊಡಬೇಕು, ತೂಕದಲ್ಲಿ ಮೋಸ ನಡೆಯುತ್ತಿದೆ ಎಂದು ಗ್ರಾಮಸ್ಥ ಕೃಷ್ಣಪ್ಪ ಹೇಳಿದಾಗ, ಉತ್ತರ ನೀಡಬೇಕಾದ ಅಧಿಕಾರಿಯೇ ಇರಲಿಲ್ಲ.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್.ಸುಮಲತ, ಜಿಲ್ಲಾ ಪಂಚಾಯತಿ ಸದಸ್ಯ ಡಾ.ಉದ್ದಂಡಯ್ಯ ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಅಶ್ವಥರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.