ಸಾರಿಗೆ ನೌಕರರು ಬದ್ಧತೆಯಿಂದ ಕಾರ್ಯ ನಿರ್ವಹಿಸಿ; ಸಚಿವರ ಆದೇಶ

 

ಬೆಂಗಳೂರು,ಸೆ.2- ಸಾರಿಗೆ ನೌಕರರು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಸಾರಿಗೆ ನಿಗಮವನ್ನು ಲಾಭದತ್ತ ಮುನ್ನಡೆಸಬೇಕು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಆದೇಶಿಸಿದರು.
ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ 2017-18ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಒಂದು ಉತ್ತಮ ಸಾರ್ವಜನಿಕಸೇವಾ ಸಂಸ್ಥೆಯಾಗಿದ್ದು, ಚಾಲಕ ನಿರ್ವಾಹಕ ತಾಂತ್ರಿಕ ವರ್ಗದವರು ಸೇರಿದಂತೆ ಇನ್ನಿತರರು ಈ ಸಂಸ್ಥೆಯ ಆಧಾರ ಸ್ತಂಭಗಳಾಗಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ 1.16 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಈ ನೌಕರರನ್ನು ಸುಭದ್ರವಾಗಿ ನೋಡಿಕೊಳ್ಳುವಂತಹ ಕೆಲಸ ಸರ್ಕಾರದ ಮೇಲಿದೆ ಎಂದರು.

ಯಾವುದೇ ಒಂದು ಸಹಕಾರ ಸಂಘ ಮತ್ತು ಸಹಕಾರ ಬ್ಯಾಂಕ್‍ಗಳು ಸುಗಮವಾಗಿ ಕಾರ್ಯ ನಿರ್ವಹಿಸಬೇಕಾದರೆ ವ್ಯವಸ್ಥಾಪಕ ನಿರ್ದೇಶಕರು ಪ್ರಾಮಾಣಿಕವಾಗಿರಬೇಕು ಎಂದರು.
ಈ ಸಂಸ್ಥೆಯು 1974ರಲ್ಲಿ ಪ್ರಾರಂಭವಾಗಿ 44 ವರ್ಷ ತುಂಬಿದೆ. ಇಷ್ಟು ವರ್ಷಗಳಲ್ಲಿ ಸಹಕಾರ ಸಂಘ ಅನೇಕ ಏಳುಬೀಳುಗಳನ್ನು ಕಂಡಿದೆ. ಆದರೂ ಸಹ 2.75 ಕೋಟಿ ಲಾಭದಲ್ಲಿದೆ ಎಂದು ತಿಳಿಸಿದರು.
ಪ್ರತಿಯೊಂದು ಹಳ್ಳಿಯಲ್ಲಿ ಸಹಕಾರ ಸಂಘ ಮತ್ತು ಪ್ರಾಥಮಿಕ ಶಾಲೆ ಇರಬೇಕೆಂಬುದು ಗಾಂಧೀಜಿ ಅವರ ಕನಸಾಗಿತ್ತು. ಈಗ ಎಲ್ಲ ಹಳ್ಳಿಗಳಲ್ಲೂ ಸಹಕಾರ ಸಂಘ ಮತ್ತು ಪ್ರಾಥಮಿಕ ಶಾಲೆಗಳಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಹಕಾರ ಸಂಘದ ಸದಸ್ಯರ ಒಂದು ತಿಂಗಳ ಸಂಬಳ ಒಗ್ಗೂಡಿಸಿ ಶೇ.1ರಷ್ಟು 17,97,507 ರೂ. ಇರುವ ಚೆಕ್‍ನ್ನು ಕೊಡಗು ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ನಿಧಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕಿ ಸೌಮ್ಯರೆಡ್ಡಿ, ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್, ಬೆಂಗಳೂರು ವಿವಿಯ ಕುಲಪತಿ ಪೆÇ್ರ.ಕೆ.ಆರ್.ವೇಣುಗೋಪಾಲ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಲದ ಅಧ್ಯಕ್ಷ ಕೆ.ಎಸ್.ಶರ್ಮ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ