ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಅಧಿಕೃತವಾಗಿ ಪ್ರಾರಂಭಿಸಿದ ಜನತಾ ದರ್ಶನ ಕಾರ್ಯಕ್ರಮ ರಾತ್ರಿ 11.30ರವರೆಗೆ ನಡೆಯಿತು.
ಈ ವೇಳೆ ಸುಮಾರು1600 ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಖುದ್ದು ಮಾತನಾಡಿ, ಪರಿಹಾರ ಒದಗಿಸಲು ನಿರ್ದೇಶನ ನೀಡಿದರು.
ಮಧ್ಯಾಹ್ನ 12.15ಕ್ಕೆ ಪ್ರಾರಂಭವಾದ ಜನತಾ ದರ್ಶನದಲ್ಲಿ ಮೊದಲಿಗೆ ಸಿಎಂ ಹೆಚ್ಡಿಕೆ ಅವರು ವಿಕಲಚೇತನರ ಬಳಿ ತೆರಳಿ ಅಹವಾಲು ಆಲಿಸಿದರು. ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ10ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂಎಸ್ ಎಸ್ ಬಿ, ವಿಕಲಚೇತನರ ಕಲ್ಯಾಣ ಇಲಾಖೆ, ಅಂಬೇಡ್ಕರ್, ದೇವರಾಜ ಅರಸು, ವಾಲ್ಮೀಕಿ, ಅಲ್ಪಸಂಖ್ಯಾತ ರ ಅಭಿವೃದ್ಧಿ ನಿಗಮಗಳು, ರಾಜೀವ್ ಗಾಂಧಿ ವಸತಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ಬಂದವರಿಗೆ ವಿವಿಧ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮುಖ್ಯಮಂತ್ರಿಗಳೇ ಸ್ವತಃ ಮಾತನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಖಾಸಗಿ ಸಾಲದ ಮೂಲಕ ಶೋಷಣೆ, ವೈದ್ಯಕೀಯ ನೆರವು, ಆರ್ಟಿಇ ಸಮಸ್ಯೆ, ಉದ್ಯೋಗಕ್ಕಾಗಿ ಮನವಿ, ವಿವಿಧ ನೆರವು ಕೋರಿ ಬಂದ ವಿಕಲಚೇತನರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಯಿತು. ಅರ್ಜಿಗಳ ನೋಂದಣಿ, ಅಹವಾಲು ಸಲ್ಲಿಸಲು ಬಂದವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.