ಬೆಂಗಳೂರು, ಸೆ.2- ಪ್ರಸ್ತುತ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಶ್ರೇಷ್ಠ ಅಧಿಕಾರಿಗಳಾಗಿ ನಾಡಿಗೆ ಉತ್ತಮ ಸೇವೆ ಸಲ್ಲಿಸುವಂತಾಗಬೇಕೆಂದು ಸಹಕಾರ ಸಚಿವ ಬಂಡೆಪ್ಪಕಾಶ್ಯಂಪುರ್ ಹೇಳಿದರು.
ಬಿಎಸ್‍ಎನ್‍ಎಲ್ ನೌಕರರ ಪತ್ತಿನ ಸಹಕಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಥೆಯು ಯಶಸ್ವಿಯಾಗಿ 50 ವರ್ಷ ಪೂರ್ಣಗೊಳಿಸಿದ್ದು, ಎತ್ತರಕ್ಕೆ ಬೆಳೆದು ನಿಂತಿದೆ. ಇದಕ್ಕೆಲ್ಲ ಸಿಬ್ಬಂದಿಗಳ ಅಪಾರ ಶ್ರಮವಿದೆ ಎಂದು ಶ್ಲಾಘಿಸಿದರು.
1968ರಲ್ಲಿ 20ರೂ. ಸಾಲ ಕೊಡುವ ಮೂಲಕ ಪ್ರಾರಂಭವಾದ ಈ ಸಂಸ್ಥೆ ಇಂದು 2 ಲಕ್ಷ ರೂ. ಲೋನ್ ಕೊಡುವ ಮಟ್ಟಿಗೆ ಎತ್ತರಕ್ಕೆ ಬೆಳೆದಿದೆ. ಸಾಮಾಜಿಕ ಕಾರ್ಯದಲ್ಲೂ ಈ ಸಂಸ್ಥೆ ದಿಟ್ಟ ಹೆಜ್ಜೆಗಳನ್ನು ಇಟ್ಟಿದೆ ಎಂದು ಸ್ಮರಿಸಿದರು.
ರಾಜ್ಯದಲ್ಲಿ ಅನೇಕ ಕ್ರಾಂತಿಗಳು ನಡೆದಿದ್ದು, ಶಿಕ್ಷಣ ಕ್ರಾಂತಿ ಆಗಬೇಕಾಗಿದೆ ಎಂದ ಅವರು, ಸಮ್ಮಿಶ್ರ ಸರ್ಕಾರವು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಕುಮಾರಸ್ವಾಮಿ ಅವರು, 12 ಗಂಟೆಗಳ ಕಾಲ ನಿಯಮಿತವಾಗಿ ಜನತಾ ದರ್ಶನ ಮಾಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ ಎಂದರು.
ಅಲ್ಲದೆ, ನಮ್ಮ ಸರ್ಕಾರ ಜನಪರ ಕಾರ್ಯಗಳನ್ನು ಜಾರಿಗೊಳಿಸಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಐಟಿಎಸ್ ಮುಖ್ಯ ಮಹಾ ಪ್ರಬಂಧಕ ಆರ್.ಮಣಿ ಸುವರ್ಣಸೌರಭ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದರು. ಐಟಿಎಸ್ ಮಹಾ ಪ್ರಬಂಧಕ ಎಸ್.ಜನಾರ್ಧನ್‍ರಾವ್ ಸಂಘದ ಅಂತರ್ಜಾಲ ತಾಣ ಉದ್ಘಾಟಿಸಿದರು.
ಸಹಕಾರಿ ಸಂಘಗಳ ನಿಬಂಧಕರಾದ ಎಂ.ಕೆ.ಅಯ್ಯಪ್ಪ ಸಂಘದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ದೊರೆಸ್ವಾಮಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಮಹಮ್ಮದ್ ಜಫ್ರುಲ್ಲಾಖಾನ್, ಸಂಸ್ಥೆಯ ನಿರ್ದೇಶಕರುಗಳು ಉಪಸ್ಥಿತರಿದ್ದರು.