ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ವೆಂಕಯ್ಯ ನಾಯ್ಡು ಅವರು ಸಚಿವರಾಗಬೇಕೆಂದು ಬಯಸಿದ್ದರು. ನಾಯ್ಡು ಅವರೂ ಕೂಡ ಗ್ರಾಮೀಣ ಅಭಿವೃದ್ಧಿ ಸಚಿವರಾಗಲು ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಬರೆದಿರುವ ‘ಮೂವಿಂಗ್ ಆನ್…ಮೂವಿನ್ ಫಾರ್ವರ್ಡ್: ಎ ಇಯರ್ ಇನ್ ಆಫಿಸ್’ ಪುಸ್ತಕ ಬಿಡುಗಡೆ ಮಾತನಾಡಿದ ಅವರು, ಅಟಲ್ ಜಿಯವರು ವೆಂಕಯ್ಯ ನಾಯ್ಡು ಅವರನ್ನು ಸಚಿವರನ್ನಾಗಿ ಮಾಡಲು ಬಯಸಿದ್ದರು. ನಾಯ್ಡು ಅವರೂ ಕೂಡ ಗ್ರಾಮೀಣ ಅಭಿವೃದ್ಧಿ ಸಚಿವರಾಗಲು ಬಯಸಿದ್ದರು. ನಾಯ್ಡು ಅವರು ರೈತರ ಹೃದಯದಲ್ಲಿದ್ದಾರೆ. ರೈತರು ಹಾಗೂ ಕೃಷಿ ಕಲ್ಯಾಣಕ್ಕೆ ನಾಯ್ಡು ಅವರು ಬದ್ಧರಾಗಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಕೃಷಿ ಕ್ಷೇತ್ರಕ್ಕೆ ಸಾಕಷ್ಟು ಬೆಂಬಲದ ಅಗತ್ಯವಿದೆ. ಹಣಕಾಸು ಸಚಿವಾಲಯದ ಅಧಿಕಾರಿಗಳು ಇಲ್ಲಿದ್ದಾರೆ. ಪ್ರತೀಯೊಬ್ಬರನ್ನೂ ಜಾಗರೂಕತೆಯಿಂದ ನೋಡಿಕೊಳ್ಳಬೇಕೆಂಬ ನನ್ನ ಹೇಳಿಕೆಯನ್ನು ಅವರು ಇಷ್ಟಪಡದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಕೃಷಿ ವಲಯ ಬಂದಾಗ ಪಕ್ಷಪಾತ ಮಾಡಬೇಕಾಗುತ್ತದೆ. ಏಕೆಂದರೆ, ಕೃಷಿ ಕ್ಷೇತ್ರ ತೊರೆಯುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದಿದ್ದಾರೆ.
ಇದೇ ವೇಳೆ ಸಂಸತ್ತಿನ ಕಾರ್ಯನಿರ್ವಹಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ ನಾಯ್ಡು, ಸರಿಯಾದ ರೀತಿಯಲ್ಲಿ ಸಂಸತ್ತು ಕಾರ್ಯನಿರ್ವಹಿಸದೇ ಇರುವುದಕ್ಕೆ ನನಗೆ ಬೇಸರವಿದೆ. ಎಲ್ಲಾ ವಿಚಾರಗಳಲ್ಲಿಯೂ ದೇಶ ಮುನ್ನಡೆ ಸಾಧಿಸುತ್ತಿದೆ. ವಿಶ್ವ ಬ್ಯಾಂಕ್, ಎಡಿಬಿ, ವಿಶ್ವ ಆರ್ಥಿಕ ವೇದಿಕೆ ದೇಶಕ್ಕೆ ನೀಡುತ್ತಿರುವ ಸಂಖ್ಯೆಗಳನ್ನು ನೋಡಿದರೆ ಸಂತೋಷವಾಗುತ್ತಿದೆ. ಆರ್ಥಿಕ ವೇದಿಕೆಯಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಪ್ರತೀ ಭಾರತೀಯ ಹೆಮ್ಮೆ ಪಡಬೇಕಿದೆ ಎಂದು ಹೇಳಿದ್ದಾರೆ.