ಚೆನ್ನೈ : ಡಿಎಂ ಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರ ಕಾಲಿಗೆ ಯಾರೂ ಎರಗಬಾರದು, ಹೂಮಾಲೆಯನ್ನೂ ಹಾಕಬಾರದು, ಕೇವಲ ಒಣಕ್ಕಂ ಎಂದು ಹೇಳುವ ಮೂಲಕ ಅವರನ್ನು ಗೌರವಿಸಬೇಕು ಎಂದು ಡಿಎಂಕೆ ತನ್ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಆದೇಶ ನೀಡಿದೆ. ಈ ಮೂಲಕ ಉತ್ತಮ ರಾಜಕೀಯ ಸಂಸ್ಕೃತಿಗೆ ಎಲ್ಲರೂ ಕಾರಣೀಭೂತರಾಗಬೇಕೆಂದು ಕರೆ ನೀಡಿದೆ.
ನಾಯಕನ ಕಾಲಿಗೆ ಎರಗುವುದು ಆತ್ಮ ಗೌರವದ ತತ್ವಗಳಿಗೆ ವಿರುದ್ಧ. ಆದ್ದರಿಂದ ಯಾರೂ ಸ್ಟಾಲಿನ್ ಕಾಲಿಗೆ ಎರಗಬಾರದು; ಒಣಕ್ಕಂ ಎಂದು ಹೇಳಿದರೆ ಸಾಕು ಎಂದಿದೆ.
ಎಐಎಡಿಎಂಕೆ ಪರಮೋಚ್ಚ ನಾಯಕಿ ದಿ. ಜಯಲಲಿತಾ ಅವರ ಅನುಯಾಯಿಗಳು, ಪದಾಧಿಕಾರಿಗಳು ಕಾಲಿಗೆ ಎರಗುತ್ತಿದ್ದುದನ್ನು ಡಿಎಂಕೆ ಲೇವಡಿ ಮಾಡುತ್ತಿತ್ತು. ಈಗ ತಾವೇ ಅಂತಹ ಕೃತ್ಯಕ್ಕೆ ಇತರರಿಂದ ಲೇವಡಿಗೆ ಗುರಿಯಾಗಬಾರದು ಎಂಬ ಕಾರಣಕ್ಕೆ ಡಿಎಂಕೆ ತನ್ನ ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ ಈ ರೀತಿ ಕಟ್ಟಪ್ಪಣೆ ಮಾಡಿದೆ.
ಈ ವರ್ಷ ಜನವರಿಯಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾದಾಗಲೇ ಸ್ಟಾಲಿನ್ , ತಮ್ಮ ಕಾಲಿಗೆ ಯಾರೂ ಎರಗಬಾರದು; ಹೂಮಾಲೆ ಹಾಕಬಾರದು ಎಂದು ತಾಕೀತು ಮಾಡಿದ್ದರು. ಆದರೂ ಅದು ಮತ್ತೆ ಮರುಕಳಿಸಿತ್ತಲ್ಲದೇ ಆಗಸ್ಟ್ 28ರಂದು ಸ್ಟಾಲಿನ್ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾಗ ಪಕ್ಷದ ಪ್ರಧಾನ ಕಾರ್ಯಾಲಯವಾದ ಅಣ್ಣಾ ಅರಿವಾಳಯಂ ನಲ್ಲಿ ಪಕ್ಷದ ಪದಾಧಿಕಾರಿಗಳು, ಸ್ಟಾಲಿನ್ ಕಾಲಿಗೆರಗಿ, ಹೂಮಾಲೆ, ಹೂ ಗುಚ್ಚ ನೀಡಿ ಗೌರವಿಸಿದ್ದರು. ಈ ಹಿನ್ನಲೆಯಲ್ಲಿ ಪಕ್ಷ ಈ ಆದೇಶ ಹೊರಡಿಸಿದೆ.