ಬೆಂಗಳೂರು, ಸೆ.1- ಮಡಿಕೇರಿ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾವು ಗ್ರಾಮವೊಂದನ್ನು ದತ್ತು ಪಡೆಯಲು ಮುಂದೆ ಬಂದಿದೆ.
ರಾಜ್ಯ ಸರ್ಕಾರ ತಕ್ಷಣವೇ ಯಾವ ಗ್ರಾಮವನ್ನು ದತ್ತು ಪಡೆಯಬೇಕೆಂದು ಸೂಚಿಸಿದರೆ ನಾವು ಆ ಗ್ರಾಮವನ್ನು ದತ್ತು ಪಡೆದು ಅಲ್ಲಿನ ನಿವಾಸಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನೊಳಗೊಂಡಂತೆ ಆದರ್ಶ ಗ್ರಾಮವನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷ ಆರ್.ಪಿ.ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೂಡಲೇ ಸರ್ಕಾರ ಗ್ರಾಮಕ್ಕೆ ಪರಿಣಿತ ಇಂಜಿನಿಯರ್ಗಳಿಂದ ಸಭೆ ನಡೆಸಿ ನೀಲ ನಕ್ಷೆಯನ್ನು ಸಿದ್ಧಪಡಿಸಿ ಕಾರ್ಯ ಯೋಜನೆಯನ್ನು ರೂಪಿಸಿದರೆ ಮುಂದಿನ ಆರು ತಿಂಗಳೊಳಗೆ ಗ್ರಾಮವನ್ನು ಅಭಿವೃದ್ದಿ ಪಡಿಸಲಾಗುವುದು. ಜನರಿಗೆ ಯೋಗ್ಯವಾದ ಸೌಕರ್ಯಗಳನ್ನು ಮಹಾಸಭಾ ಕಲ್ಪಿಸಿಕೊಡಲಿದೆ ಎಂದು ಆಶ್ವಾಸನೆ ನೀಡಿದರು.
ಈ ಹಿಂದೆ 2009ರಲ್ಲಿ ರಾಯಚೂರು ಜಿಲ್ಲೆಯಲ್ಲೂ ಇದೇ ರೀತಿ ಪ್ರವಾಹ ಉಂಟಾಗಿ ಮನೆಮಠ ಕಳೆದುಕೊಂಡು ಸಂತ್ರಸ್ತರಾಗಿದ್ದವರಿಗೆ ಮಹಾಸಭಾದ ವತಿಯಿಂದ ನೆರವು ನೀಡಿತ್ತು. ಈಗ ಇದೇ ರೀತಿ ಮಡಿಕೇರಿ ಜನರ ಸಹಾಯಕ್ಕೆ ಮಹಾಸಭಾದ ಕುಲಬಾಂಧವರು ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಂತ್ರಸ್ತರ ಮನೆಗಳ ದುರಸ್ತಿ , ನಿರ್ಮಾಣ, ಮನೆಗಳ ವಿದ್ಯುದ್ದೀಕರಣ, ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವುದು, ಸೈಕಲ್ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ಪಾತ್ರೆ, ಪೀಠೋಪಕರಣಗಳು, ಆರೋಗ್ಯ ತಪಾಸಣೆ, ಉಚಿತ ಔಷಧಿ, ಕೃಷಿ ಯಂತ್ರ ಉಪಕರಣಗಳು ಸೇರಿದಂತೆ ಹಲವು ರೀತಿಯಲ್ಲಿ ನೆರವು ನೀಡಬೇಕೆಂದು ರವಿಶಂಕರ್ ತಿಳಿಸಿದರು.
ಈ ಯೋಜನೆಯ ಅನುಷ್ಠಾನಕ್ಕೆ ನಮ್ಮ ಮಹಾಸಭಾದ ವತಿಯಿಂದ ಸುಮಾರು ಎರಡು ಕೋಟಿಗೂ ಹೆಚ್ಚು ಹಣ ಖರ್ಚಾಗಲಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ನೆರವಿಗೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕೆಂದು ಮನವಿ ಮಾಡಿದರು.