ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾಲೀಕತ್ವದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡಿದ ಆರೋಪ

ತುಮಕೂರು, ಸೆ.1-ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮಾಲೀಕತ್ವದ ತುಮಕೂರಿನ ಹೆಗ್ಗೆರೆಯಲ್ಲಿರುವ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡಿದ ಆರೋಪ ಕೇಳಿಬಂದಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಮೆರಿಟ್ ಪಡೆದ ವಿದ್ಯಾರ್ಥಿಗಳಿಗೆ ಸೀಟ್ ನೀಡದೇ ಹೆಚ್ಚು ಹಣ ಕೊಟ್ಟವರಿಗೆ ಪ್ರವೇಶ ನೀಡಲಾಗಿದೆ ಎನ್ನಲಾಗಿದೆ. ಡೀಮ್ಡ್ ಯುನಿವರ್ಸಿಟಿಯ ನಿಯಮದ ಪ್ರಕಾರ ಪ್ರತಿ ವೈದ್ಯಕೀಯ ಸೀಟನ್ನು ಮೆರಿಟ್ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಅಲ್ಲದೆ ಪ್ರತಿ ವರ್ಷಕ್ಕೆ 15 ಲಕ್ಷ ರೂ. ಶುಲ್ಕದಂತೆ ನಾಲ್ಕು ವರ್ಷಕ್ಕೆ 60 ಲಕ್ಷ ರೂ ಪಡೆಯಬೇಕು.
ಆದರೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ, ಈ ನಿಯಮಗಳನ್ನೆಲ್ಲಾ ಧಿಕ್ಕರಿಸಿ ಅಕ್ರಮವಾಗಿ 1 ಕೋಟಿ 20 ಲಕ್ಷ ರೂ.ಗಳಿಗೆ ಸುಮಾರು 53 ಮೆಡಿಕಲ್ ಸೀಟ್ ಮಾರಾಟ ಮಾಡಿದೆ ಎಂಬುದು ನೊಂದ ವಿದ್ಯಾರ್ಥಿಗಳ ದೂರು. ಅಂದರೆ ಪ್ರವೇಶಾತಿ ವೇಳೆಯಲ್ಲಿ 60 ಲಕ್ಷ ಡೊನೇಷನ್ ಪಡೆದು ಬಳಿಕ ಪ್ರತಿ ವರ್ಷಕ್ಕೆ 15 ಲಕ್ಷ ರೂ. ಶುಲ್ಕ ನೀಡುವ ಒಪ್ಪಂದದೊಂದಿಗೆ ಸೀಟು ಬಿಕರಿ ಮಾಡಲಾಗಿದೆ ಎನ್ನಲಾಗಿದೆ.
ಮೆರಿಟ್ ಆಧಾರದ ಮೇಲೆ ಅಡ್ಮಿಷನ್ ಮಾಡಿಕೊಳ್ಳಲು 15 ಲಕ್ಷ ರೂ. ಡಿಡಿಯೊಂದಿಗೆ ಬಂದ ವಿದ್ಯಾರ್ಥಿಗಳನ್ನು ಗೇಟ್ ಹೊರಗಡೆಯೇ ನಿಲ್ಲಿಸಿ ವಾಪಸ್ ಕಳುಹಿಸಲಾಗಿದೆ. ಕಾಲೇಜು ಆವರಣದಲ್ಲಿ ಹೆಚ್ಚಿನ ದುಡ್ಡಿಗೆ ವ್ಯವಹಾರ ಕುದುರಿಸುವ ಏಜೆಂಟ್ಗಳನ್ನು ಬಿಡಲಾಗಿದೆ. ಇದರಿಂದ ಅರ್ಹ ವಿದ್ಯಾರ್ಥಿಗಳಿಗೆ ಮೋಸವಾಗುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿ ಬಳಿ ಮಾಧ್ಯಮದವರು ಪ್ರತಿಕ್ರಿಯೆ ಕೇಳಲು ಹೋದಾಗ ನಿರ್ದೇಶಕರನ್ನು ಭೇಟಿ ಮಾಡಲು ಅವಕಾಶ ನೀಡದೆ ಹೊರಗೆ ಕಳುಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ