ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ಬಾಗಲಕೋಟೆಯ ಚರಂತಿಮಠ ಸಭಾಭವನದಲ್ಲಿ ವಿಶೇಷ ಸಭೆ

Varta Mitra News

ಬೆಂಗಳೂರು, ಸೆ.1- ಉತ್ತರ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಹದಿಮೂರು ಜಿಲ್ಲೆಗಳ ಅಭಿವೃದ್ಧಿಗೆ ಹಾಗೂ ಪ್ರತ್ಯೇಕ ರಾಜ್ಯ ಹೋರಾಟಕ್ಕಾಗಿ ಸೆ.23ರಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯ ಚರಂತಿಮಠ ಸಭಾಭವನದಲ್ಲಿ ವಿಶೇಷ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶಗೋಲಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಾಗಿ 100 ದಿನಗಳು ಕಳೆದಿವೆ ರೈತರಿಗೆ, ಯುವಕರಿಗೆ, ಕಾರ್ಮಿಕರಿಗೆ ಅದರಲ್ಲೂ ಉತ್ತರ ಕರ್ನಾಟಕದವರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸಲು ಸರ್ಕಾರ ಪ್ರಯತ್ನಿಸಿಲ್ಲ ಎಂದು ದೂರಿದರು.
ಜುಲೈ 31ರಂದು ಬೆಳಗಾವಿಯಲ್ಲಿ ನಡೆದ ನೂರಾರು ಮಠಾಧೀಶರ ಧರಣಿ ಸತ್ಯಾಗ್ರಹಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ ಕೆಲವು ಭರವಸೆಗಳನ್ನು ಈಡೇರಿಸುವುದಾಗಿ ಹೇಳಿ 15 ದಿನಗಳ ಕಾಲಾವಕಾಶ ಕೇಳಿದ್ದರು. ಆದರೆ, ತಿಂಗಳುಗಳೇ ಕಳೆದು ಹೋಗಿವೆ. ಯಾವುದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಮತ್ತಷ್ಟು ಉತ್ತರ ಕರ್ನಾಟಕ ವಿರೋಧಿ ನೀತಿಯನ್ನೇ ಅನುಸರಿಸುತ್ತಿದ್ದಾರೆ. ಕರ್ನಾಟಕ ಏಕೀಕರಣವಾಗಿ 63 ವರ್ಷಗಳು ಕಳೆದರೂ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ನಡುವಿನ ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಿಲ್ಲ. ಕೃಷಿ, ಶಿಕ್ಷಣ, ಆರೋಗ್ಯ, ಮಾಧ್ಯಮ, ಉದ್ಯಮ, ರಾಜಕಾರಣ, ಯುವಜನ ಹಾಗೂ ಮಹಿಳಾ ಸಬಲೀಕರಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಇದೆ. ಆದ್ದರಿಂದ ನಾವು ಪ್ರತ್ಯೇಕ ರಾಜ್ಯಾಕ್ಕಾಗಿ ಹೋರಾಟ ಮಾಡಲು ಸಭೆಯನ್ನು ಕರೆಯಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಸಭೆಯ ಸಾನಿಧ್ಯವನ್ನು ಸಮಿತಿಯ ಗೌರವಾಧ್ಯಕ್ಷ ಶ್ರೀ ಜಗದ್ಗುರು ಪಂಚಮಶಿವಲಿಂಗೇಶ್ವರ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ಸಮಿತಿಯ ರಾಜ್ಯಾಧ್ಯಕ್ಷ ಭೀಮಪ್ಪಗಡಾದ ವಹಿಸಲಿದ್ದಾರೆ. ಪ್ರಮುಖ ಮಠಾಧೀಶರು, ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಪ್ರತ್ಯೇಕ ರಾಜ್ಯ ರಚನೆಗಾಗಿ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ನಾಗೇಶಗೊಲಶೆಟ್ಟಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ