ಬೆಂಗಳೂರು, ಸೆ.1- ಬೀದಿ ನಾಯಿಗಳಿಂದ ಮಕ್ಕಳಿಗೆ ಹಾಗೂ ಜನರಿಗೆ ಅನಾನುಕೂಲ ಆಗದಂತೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಂದು ಅಧಿಕೃತವಾಗಿ ಜನತಾದರ್ಶನ ಆರಂಭಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಪ್ರಾಣಿಗಳ ರಕ್ಷಣೆ ಮಾಡಲು ಕಾನೂನಿದೆ. ಮತ್ತೊಂದು ಕಡೆ ಬೀದಿ ನಾಯಿಗಳ ದಾಳಿಯಿಂದ ಮಕ್ಕಳು ಹಾಗೂ ಜನರಿಗೆ ತೊಂದರೆಗಳಾಗುತ್ತಿವೆ. ಈ ವಿಚಾರದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಹಲವು ವರ್ಷಗಳಿಂದ ಮಕ್ಕಳ ಮೇಲೆ ಬೀದಿ ನಾಯಿಗಳ ಹಾವಳಿ ನಡೆಯುತ್ತಾ ಬಂದಿದೆ. ಕೆಲವು ಕಡೆಗಳಲ್ಲಿ ಮಕ್ಕಳ ಮೇಲೆ ನಾಯಿ ದಾಳಿಯಿಂದ ತೀವ್ರ ಸ್ವರೂಪದ ಸಮಸ್ಯೆಗಳಾಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು.
138 ಕೋಟಿ ರೂ. ದೇಣಿಗೆ:
ಕೊಡಗು ಸೇರಿದಂತೆ ಮಳೆ ಅನಾಹುತ ಉಂಟಾಗಿ ಸಂಕಷ್ಟದಲ್ಲಿರುವ ಜನರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದುವರೆಗೂ 138 ಕೋಟಿ ರೂ. ದೇಣಿಗೆ ಬಂದಿದೆ ಎಂದರು.
ಶೃಂಗೇರಿಯ ಶಾರದಾಪೀಠದಿಂದ 11 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಶೃಂಗೇರಿ ಮಠದ ಗುರುಗಳು ಅಲ್ಲಿನ ಆಡಳಿತಾಧಿಕಾರಿ ಗೌರಿಶಂಕರ್ ಮೂಲಕ ಕೊಡಗು ಸೇರಿದಂತೆ ಮಳೆ ಅನಾಹುತವಾದ ಸಂಕಷ್ಟದಲ್ಲಿರುವ ಜನರ ನೆರವು ನೀಡಲು 11 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ದೇವನಹಳ್ಳಿ ಶಾಲಾ ಮಕ್ಕಳು 4 ಲಕ್ಷ, ಎನ್ಜಿಇಎಫ್ ನೌಕರರ ಸಂಘದಿಂದ ಒಂದು ಲಕ್ಷ ನೀಡಲಾಗಿದೆ. ಸದ್ದೆಗಟ್ಟ ಗ್ರಾಮಸ್ಥರು 20ಸಾವಿರ ರೂ. ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಇಂದು ಪ್ರಕೃತಿ ವಿಕೋಪಕ್ಕೆ ದೇಣಿಗೆ ನೀಡಿವೆ ಎಂದರು.