ಮೈಸೂರು, ಸೆ.1- ಸಾಂಸ್ಕøತಿಕ ನಗರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಈ ಬಾರಿ ನಿರಾಸೆ ಕಾದಿದೆ.
ಮೈಸೂರಿನ ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾದ ಜಗನ್ಮೋಹನ ಅರಮನೆಗೆ ಬೀಗ ಜಡಿಯಲಾಗಿದೆ.
ದುರಸ್ತಿ ನೆಪದಲ್ಲಿ ಸುಮಾರು ಎರಡು ತಿಂಗಳವರೆಗೆ ಜಗನ್ಮೋಹನ ಅರಮನೆಗೆ ಬೀಗ ಹಾಕಲಾಗಿದೆ. ಜತೆಗೆ ಫಲಕ ಲಗತ್ತಿಸಿ ಶ್ರೀಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ, ಜಗನ್ಮೋಹನ ಅರಮನೆಯನ್ನು ನಿರ್ವಹಣೆ ಹಾಗೂ ದುರಸ್ತಿ ಕಾರ್ಯಕ್ಕಾಗಿ ಮುಚ್ಚಲಾಗಿದೆ ಎಂದು ಬರೆಯಲಾಗಿದೆ.
ಮುಂದಿನ ತಿಂಗಳು ದಸರಾ ಹಬ್ಬ ಇದೆ. ಅಲ್ಲದೆ ಪ್ರತಿದಿನ ನಗರಕ್ಕೆ ಪ್ರವಾಸಿಗರು ಬರುತ್ತಿರುತ್ತಾರೆ. ದಸರಾ ಸಂದರ್ಭದಲ್ಲೇ ಜಗನ್ಮೋಹನ ಅರಮನೆಯನ್ನು ಮುಚ್ಚಿರುವುದು ಸರಿಯಲ್ಲ. ಈ ಮೊದಲೇ ದುರಸ್ತಿ ಕಾರ್ಯ ಮಾಡಬೇಕೆಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಆರ್ಟ್ ಗ್ಯಾಲರಿಯ ಮೇಲಿನ ಒಂದು ಭಾಗ ಕುಸಿದಿರುವುದರಿಂದ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಅರಮನೆ ಆವರಣದಲ್ಲಿ ಹಲವಾರು ವ್ಯಾಪಾರಿಗಳು ಪ್ರತಿದಿನ ವ್ಯಾಪಾರ ಮಾಡುತ್ತಿದ್ದರು. ಇದೀಗ ಇದನ್ನು ಮುಚ್ಚಿರುವುದರಿಂದ ವಹಿವಾಟು ಇಲ್ಲದೆ ಪರದಾಡುವಂತಾಗಿದೆ. ಶೀಘ್ರ ದುರಸ್ತಿ ಕಾರ್ಯ ಮುಗಿಸಬೇಕೆಂದು ಅಲವತ್ತುಕೊಂಡಿದ್ದಾರೆ.