ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ)ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಈ ಪಾವತಿ ಬ್ಯಾಂಕು ಬ್ಯಾಂಕಿಂಗ್ ಮತ್ತು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯನ್ನೇ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಎಲ್ಲಾ ಬ್ಯಾಂಕಿಂಗ್ ಸೇವೆಗಳು ಪೋಸ್ಟ್ಮನ್ ಮೂಲಕ ಜನರ ಮನೆಬಾಗಿಲಿಗೆ ಬರಲಿವೆ. ಐಪಿಪಿಬಿ ರೈತರಿಗೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ವಿಸ್ತರಣೆಯಲ್ಲಿ ಐಪಿಪಿಬಿ ನೆರವಾಗಲಿದೆ.
1947ರಿಂದ 2008ರ ವರೆಗೆ ಬ್ಯಾಂಕುಗಳು 18 ಲಕ್ಷ ಕೋಟಿ ರೂ.ಗಳ ಸಾಲ ನೀಡಿವೆ. ನಂತರದ 6 ವರ್ಷಗಳಲ್ಲಿ 52 ಲಕ್ಷ ಕೋಟಿ ಸಾಲಗಳನ್ನು ವಿತರಿಸಲಾಗಿದೆ ಎಂದ ಪ್ರಧಾನಿ, ಯುಪಿಎ ಆಡಳಿತಾವಧಿಯಲ್ಲಿ ಸಾಲಗಳನ್ನು ಮಂಜೂರು ಮಾಡುವಾಗ ಬಹಳಷ್ಟು ಅಕ್ರಮಗಳು ನಡೆದಿವೆ ಎಂದು ಟೀಕಿಸಿದರು.
ನಿಜವಾಗಿ ಅರ್ಹತೆಯುಳ್ಳವರಿಗೆ ಸಾಲಗಳು ತಲುಪದಂತೆ ಮಾಡಿದ ಭಾವಿ ವ್ಯಕ್ತಿಗಳು ಕೋಟ್ಯಂತರ ರೂ.ಗಳನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು. ವಸೂಲಾಗದ ಸಾಲಗಳ ಬಗ್ಗೆ ಹಿಂದಿನ ಸರಕಾರ ದೇಶವನ್ನು ಕತ್ತಲೆಯಲ್ಲಿಟ್ಟಿತ್ತು ಎಂದು ತಿಳಿಸಿದರು.
ಆರ್ಥಿಕ ಹಗರಣಗಳಲ್ಲಿ ಭಾಗಿಯಾದವರಿಗೆ ಒಂದಲ್ಲ ಒಂದು ದಿನ ತಮ್ಮ ರಹಸ್ಯ ಬಯಲಿಗೆ ಬರುತ್ತದೆ ಎಂಬುದೂ ತಿಳಿದಿತ್ತು.ದೇಶದ ಬೊಕ್ಕಸಕ್ಕೆ ಕನ್ನ ಕೊರೆದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಕಟಕಟೆಗೆ ಎಳೆದು ತರದೆ ಸುಮ್ಮನೆ ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಕೇಂದ್ರ ಎನ್ ಡಿಎ ಸರಕಾರ 32 ಕೋಟಿಗೂ ಹೆಚ್ಚು ಜನ್ಧನ್ ಖಾತೆಗಳನ್ನು ತೆರದಿದೆ ಎಂದು ಅವರು ವಿವರಿಸಿದರು.
Prime Minister Narendra Modi launched India Post Payments Bank (IPPB).