ಬೆಂಗಳೂರು, ಆ.31-ಅಲ್ಲಲ್ಲಿ ಮತ ಯಂತ್ರ ದೋಷ, ಸಣ್ಣಪುಟ್ಟ ಘರ್ಷಣೆ, ಹಲವೆಡೆ ಮತದಾನ ವಿಳಂಬ, ಹಲವೆಡೆ ಬೂತ್ ಬದಲಾವಣೆ, ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಹೆಣಗಾಟ, ಆಮಿಷ, ಗೊಂದಲ, ಮಾತಿನ ಚಕಮಕಿಗಳ ನಡುವೆ ನಡೆದ ಮೂರು ಮಹಾನಗರ ಪಾಲಿಕೆ, 102 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಹುತೇಕ ಶಾಂತಿಯುತವಾಗಿ ಮಧ್ಯಾಹ್ನದ ವೇಳೆಗೆ ಶೇ.50ರಷ್ಟು ಮತದಾನವಾಗಿತ್ತು.
ಆಡಳಿತಾರೂಢ ಕಾಂಗ್ರೆಸ್, ಜೆಡಿಎಸ್ ಮತ್ತು ವಿರೋಧ ಪಕ್ಷ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿರುಸಿನಿಂದ ಸಾಗಿತ್ತು. ಕೊನೆ ಕ್ಷಣದವರೆಗೂ ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ಮತ ಯಾಚನೆ ಮಾಡುತ್ತಿದ್ದುದು ಕಂಡುಬಂತು.
ಮೈಸೂರು, ತುಮಕೂರು, ಶಿವಮೊಗ್ಗ ಮಹಾನಗರ ಪಾಲಿಕೆ, ಚಿತ್ರದುರ್ಗ, ಚಳ್ಳಕೆರೆ, ಚಾಮರಾಜನಗರ, ಹಾಸನ ಸೇರಿದಂತೆ 21 ಜಿಲ್ಲೆಗಳ, 88 ತಾಲೂಕುಗಳ, 102 ನಗರ ಸ್ಥಳೀಯ ಸಂಸ್ಥೆಗಳು ಸೇರಿ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ನಡೆದ ಚುನಾವಣೆಗೆ ಜನ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು.
ಮಂಡ್ಯ, ನಾಗಮಂಗಲ, ಹಾವೇರಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದರೆ, ಇತ್ತ ಮೈಸೂರಿನ ಅರವಿಂದ ನಗರದ 64ನೇ ವಾರ್ಡ್ ಬೂತ್ನಂ.11ರಲ್ಲಿ ಮತಯಂತ್ರ ಕೈಕೊಟ್ಟು ಮತದಾನ ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿಳಂಬವಾಗಿದ್ದರಿಂದ ಮತದಾನಕ್ಕೆ ಹೆಚ್ಚುವರಿ ಸಮಯಕ್ಕಾಗಿ ಆಗ್ರಹಿಸಿದರು. ಸರತಿ ಸಾಲಿನಲ್ಲಿ ನಿಂತವರು ಬೇಸತ್ತು ಹಿಂತಿರುಗಿದ ಘಟನೆಯೂ ನಡೆಯಿತು.
ಅದೇ ರೀತಿ ವಾರ್ಡ್ ನಂ.19 ರಲ್ಲಿ ಕ್ಷೇತ್ರಗಳ ವಿಂಗಡಣೆಯಿಂದ ಬೂತ್ಗಳ ಬಗ್ಗೆ ಮಾಹಿತಿ ತಿಳಿಯದೆ ಮತದಾರರು ಪರದಾಡಬೇಕಾಯಿತು.
ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ಮತಗಟ್ಟೆ 2 ರಲ್ಲಿ ಶಾಸಕರ ಕುಟುಂಬದವರು ಅನಧಿಕೃತವಾಗಿ ಮತಗಟ್ಟೆ ಪ್ರವೇಶ ಮಾಡಿ ಪರಿಶೀಲಿಸಿದರು ಎಂಬ ಆರೋಪ ಕೇಳಿಬಂತು.
ಹಾಸನದ 2ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿ ಸುಜಾತ ಅವರ ಕ್ರಮಸಂಖ್ಯೆ ಬದಲಾಗಿದ್ದು, ಅವರಿಗೆ 2ರ ಬದಲು 3 ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಯ ಕ್ರಮಸಂಖ್ಯೆ 3 ರ ಬದಲು 2 ಎಂದು ಮುದ್ರಿಸಲಾಗಿದೆ. ಇದನ್ನು ಪ್ರಶ್ನಿಸಿ ಅಭ್ಯರ್ಥಿ ಪ್ರತಿಭಟನೆ ನಡೆಸಿದರು. ಮುದ್ರಣದ ವೇಳೆ ಆಗಿರುವ ಲೋಪ ಎಂದು ತಹಸೀಲ್ದಾರರು ಸಮಜಾಯಿಷಿ ನೀಡಿದ್ದಾರೆ.
ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ, ರಾಜ್ಯದ ಹಲವೆಡೆ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತಗಟ್ಟೆಗಳಲ್ಲಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಬಳ್ಳಾರಿಯ ಕುಡುತಿನಿಯಲ್ಲಿ ನಾಲ್ಕನೆ ವಾರ್ಡ್ನ ಅಭ್ಯರ್ಥಿ ಹುನ್ನೂರು ಸ್ವಾಮಿ ದಂಪತಿ ಮತಗಟ್ಟೆಗೆ ಪೂಜೆ ಸಲ್ಲಿಸಿದರು. ಬಾಗಲಕೋಟೆಯ ಎರಡೂ ಮತಗಟ್ಟೆಗಳಿಗೆ ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿದ್ದಾರೆ. ಅದೇ ರೀತಿ ಹಾವೇರಿ ನಗರದಲ್ಲಿ ಮತಗಟ್ಟೆ ಕೇಂದ್ರದ ಮುಂದೆ ತೆಂಗಿನಕಾಯಿ ಒಡೆದು, ಬಾಗಿಲಿಗೆ ಹಾರ ಹಾಕಿ ಪೂಜೆ ಮಾಡಲಾಗಿದೆ.
ರಾಯಚೂರು ವಾರ್ಡ್ ನಂ.26ರಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿ ವಿಜಯ್ಮೋತ, ಪಕ್ಷೇತರ ಅಭ್ಯರ್ಥಿ ರಾಜಗೋಪಾಲ್ ಅವರ ನಡುವೆ ಜಟಾಪಟಿ ನಡೆದಿದ್ದು, ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಪೆÇಲೀಸರ ಮಧ್ಯಪ್ರವೇಶದಿಂದ ಮತದಾನಕ್ಕೆ ಚಾಲನೆ ನೀಡಲಾಯಿತು.
ಯಾದಗಿರಿ ಮತಗಟ್ಟೆ ಸಂಖ್ಯೆ 28ರಲ್ಲಿ ಮತದಾನ ವಿಳಂಬವಾಗಿದೆ ಎಂದು ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬೀದರ್ನ ಹಳ್ಳಿಖೇಡ್ ಪುರಸಭೆಯ 14ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಅಸೀಫ್ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ ಹಾಗೂ ಬೆಂಬಲಿಗರಿಗೆ ಪೆÇಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕೊಪ್ಪಳ ವಾರ್ಡ್ ನಂ.3ರ ಕಾಂಗ್ರೆಸ್ ಅಭ್ಯರ್ಥಿ ಅಮ್ಜದ್ ಭಾವಚಿತ್ರ ತೋರಿಸಿ ಮತದಾನಕ್ಕೆ ಪ್ರಚೋದನೆ ನೀಡಿದ್ದಾರೆ ಎಂಬ ವಿಷಯಕ್ಕೆ ಕೆಲ ಕಾಲ ಗೊಂದಲ ಉಂಟಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಕಾರಣವಾಯಿತು.
ಮುದ್ದೇಬಿಹಾಳ ಪುರಸಭೆ ಚುನಾವಣೆ ವಾರ್ಡ್ ನಂ.4 ಮತ್ತು 5ರ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ವೋಟರ್ ಸ್ಲಿಪ್ ನೀಡುತ್ತಿದ್ದ ವಿವಿಧ ಪಕ್ಷಗಳ ಬೆಂಬಲಿಗರ ಗುಂಪನ್ನು ಸ್ವತಃ ಜಿಲ್ಲಾಧಿಕಾರಿ ಶೆಟ್ಟಣ್ಣನವರೇ ಲಾಠಿ ಹಿಡಿದು ಚದುರಿಸಿದ ಘಟನೆ ನಡೆದಿದೆ.
ಮುದ್ದೇಬಿಹಾಳದ 22 ವಾರ್ಡ್ಗಳಲ್ಲೂ ಮತದಾನ ಶಾಂತಿಯುತವಾಗಿ ಮತದಾನ ನಡೆದಿದೆ.
ಮಂಡ್ಯ ನಗರಸಭೆಯ ಎಲ್ಲಾ 35 ವಾರ್ಡ್ಗಳಲ್ಲಿ ಬಿರುಸಿನ ಮತದಾನ ನಡೆದಿದೆ. ಎಲ್ಲ ಕಡೆ ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ನಿಂತು ಹುಮ್ಮಸ್ಸಿನಲ್ಲಿ ಮತದಾರರು ಮತ ಚಲಾಯಿಸಿದ್ದು, ಕಂಡು ಬಂತು.
ಬಾಗಲಕೋಟೆ ಜಿಲ್ಲೆ ಇಳಕಲ್ ನಗರಸಭೆ ವಾರ್ಡ್ ನಂ.29ರ ಮತಗಟ್ಟೆ ಕೇಂದ್ರ 4, ನವನಗರ ವಾರ್ಡ್ ನಂ.20ರ ಮತಗಟ್ಟೆ ಸಂಖ್ಯೆ 78ರ ಮತಗಟ್ಟೆಯಲ್ಲಿ ಇವಿಎಂ ಯಂತ್ರದಲ್ಲಿ ದೋಷ ಕಾಣಿಸಿಕೊಂಡು ಒಂದು ಗಂಟೆ ತಡವಾಗಿ ಮತದಾನ ಆರಂಭವಾಗಿದೆ.
ಶಿವಮೊಗ್ಗ ಮತಗಟ್ಟೆ 162, 163ರಲ್ಲಿ ಮೀನಾಗೋವಿಂದರಾಜ್ ಬಿಜೆಪಿ ಅಭ್ಯರ್ಥಿ ಪರ ಮತಗಟ್ಟೆ ಬಳಿ ಬಹಿರಂಗ ಪ್ರಚಾರ ಮಾಡಿದ್ದರಿಂದ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.
ತನ್ನ ಮಗನೊಂದಿಗೆ ದ್ವಿಚಕ್ರ ವಾಹನದಲ್ಲಿ ಬೆಳಗಾವಿಯ ಗೋಕಾಕ್ ನಗರಸಭೆಯ ಮತಗಟ್ಟೆ 33ಕ್ಕೆ ಬಂದ ಸಚಿವ ರಮೇಶ್ ಜಾರಕಿ ಹೊಳಿ ಅವರ ಹೆಸರು ಮತಪಟ್ಟಿಯಲ್ಲಿ ಇರಲೇ ಇಲ್ಲ. ಹೆಸರು ಹುಡುಕಲು ಹರಸಾಹಸಪಟ್ಟರು. ಆದರೆ ಮತಗಟ್ಟೆ 34ರಲ್ಲಿ ಪತ್ತೆಯಾಯಿತು. ಅಲ್ಲಿಗೆ ತೆರಳಿ ಮತ ಚಲಾಯಿಸಿದರು.
ಮೈಸೂರಿನ ವಾಣಿ ವಿದ್ಯಾಮಂದಿರ ಶಾಲೆಯಲ್ಲಿ ಮಾಜಿ ಸಚಿವ ಎಸ್.ಎ.ರಾಮದಾಸ್ ಮತ ಚಲಾಯಿಸಿದರೆ, ಶಿವಮೊಗ್ಗದ ರವೀಂದ್ರ ನಗರದಲ್ಲಿ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಮ್ಮ ಮತ ಚಲಾಯಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಮೆರಿಕ ಪ್ರವಾಸದಲ್ಲಿರುವ ಕಾರಣ ಹಾಗೂ ಹಿರಿಯ ಸಾಹಿತಿ ಎಸ್.ಎಲ್.ಭೆರಪ್ಪ ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಮತ ಚಲಾಯಿಸಲು ಸಾಧ್ಯವಾಗಿಲ್ಲ.