ಬೀದರ, ಆ.31 ಪಶು ಸಂಪತ್ತು ದೇಶದ ಸಂಪತ್ತು ಆಗಿದೆ. ಈ ದಿಶೆಯಲ್ಲಿ ಪಶುವೈದ್ಯಕೀಯ ಪದವೀಧರರು ಸಹಸ್ರಾರು ರೈತಾಪಿ ವರ್ಗದವರಿಗೆ ಆಶಾಕಿರಣವಾಗಿದ್ದಾರೆ ಎಂದು ಭಾರತ ಸರ್ಕಾರದ ಗೌರವಾನ್ವಿತ ಉಪರಾಷ್ಟ್ರಪತಿಗಳಾದ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಹೇಳಿದರು.
ನಂದಿನಗರದಲ್ಲಿ ಆ.31ರಂದು ನಡೆದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ಅವರು, ಈ ಘಟಿಕೋತ್ಸವದಲ್ಲಿ ಪದವಿ ಪಡೆಯುತ್ತಿರುವ ಎಲ್ಲಾ ಅಭ್ಯರ್ಥಿಗಳು ತಮ್ಮ ಸೇವೆಯನ್ನು ಮುಂದಿನ ದಿನಗಳಲ್ಲಿ ಸಂಶೋಧನೆ ಹಾಗೂ ರೈತಾಪಿ ವರ್ಗದವರ ಕಲ್ಯಾಣಕ್ಕಾಗಿ ಮೀಸಲಿಡಬೇಕು ಎಂದು ಕರೆ ನೀಡಿದರು.
ರೈತಾಪಿ ವರ್ಗದವರು ಸಮಸ್ತ ದೇಶದ ಜನತೆಗೆ ಆಹಾರದ ಸುಭದ್ರತೆ ಒದಗಿಸುವಲ್ಲಿ ಗಣನೀಯ ಕೊಡುಗೆ ನೀಡುತ್ತಿದ್ದಾರೆ. ಪಶುಸಂಗೋಪನೆಯು ರೈತಾಪಿ ವರ್ಗದವರಿಗೆ ಜೀವನೋಪಾಯದ ಸುಭದ್ರತೆ ಒದಗಿಸುತ್ತದೆ. ಜೊತೆಗೆ ಸುಸ್ಥಿರ ಕೃಷಿಗೆ ಸಾವಯವ ಗೊಬ್ಬರ, ಪೌಷ್ಠಿಕ ಆಹಾರಗಳಾದ ಹಾಲು, ಮೊಟ್ಟೆ, ಮಾಂಸದ ಜೊತೆಗೆ ಕೃಷಿ ತ್ಯಾಜ್ಯ ಬಳಸಿ ಪೂರಕ ಆದಾಯ ಒದಗಿಸುತ್ತಿದೆ. ನೈಸರ್ಗಿಕ ವಿಕೋಪಗಳಾದ ಬರಗಾಲ ಮತ್ತು ವಾತಾವರಣ ವೈಫರಿತ್ಯ ಸಂಭವಿಸಿದಾಗ ಪಶುಸಂಪತ್ತು ಜೀವ ವಿಮೆ ಆಗಿ ಪರಿಣಮಿಸಿದೆ ಎಂದು ಅವರು ತಿಳಿಸಿದರು.
ಮೀನು ಜಲ ಕೃಷಿಯು ಅತ್ಯಂತ ತ್ವರಿತಗತಿಯಲ್ಲಿ ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಬೆಳೆಯುತ್ತಿದೆ. ಭಾರತವು ಹಸಿರು ಕ್ರಾಂತಿ, ಶ್ವೇತ ಕ್ರಾಂತಿಯನ್ನು ಈಗಾಗಲೇ ಸಾಧಿಸಿದೆ. ಪಶುಸಂಗೋಪನೆ ಮಾಡುತ್ತಿರುವ ರೈತರು ಜೀವನೋಪಾಯದ ವ್ಯವಸಾಯದಿಂದ ಆರ್ಥಿಕ ಸುಭದ್ರತೆಯ ಉದ್ಯಮದ ಕಡೆಗೆ ಗಮನಹರಿಸಬೇಕಾಗಿದೆ. ಹಣಕಾಸು ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕವು ಕೃಷಿ ಪ್ರಧಾನ ರಾಜ್ಯವಾಗಿದೆ. ಶೇ.71 ಪ್ರತಿಶತ ಜನರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಫಿ, ಕಚ್ಚಾ ರೇಷ್ಮೆ ಹಾಗೂ ಶ್ರೀಗಂಧ ಬೆಳೆಯುವಲ್ಲಿ ಮಂಚೂಣಿಯಲ್ಲಿದ್ದಾರೆ. ಭಾರತ ಸರ್ಕಾರವು ದೇಶಿಯ ತಳಿ ಅಭಿವೃದ್ಧಿಯ ಸಂರಕ್ಷಣೆ ಹಾಗೂ ಹಾಲಿನ ಇಳುವರಿ ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ.ಹೆಚ್.ಡಿ.ನಾರಾಯಣಸ್ವಾಮಿ ಅವರು ಮಾತನಾಡಿ, ಈ ವಿಶ್ವವಿದ್ಯಾಲಯವು ರಾಜ್ಯಾದ್ಯಂತ ಎಂಟು ಮಹಾವಿದ್ಯಾಲಯಗಳನ್ನು ಹೊಂದಿದೆ. ನೂತನವಾಗಿ ಅಥಣಿ ಮತ್ತು ಪುತ್ತೂರಿನಲ್ಲಿ ಮಹಾವಿದ್ಯಾಲಯಗಳನ್ನು ಪ್ರಾರಂಭಿಸಲು ಅನುಮೋದನೆ ದೊರೆತಿದ್ದು, ಪ್ರಾಥಮಿಕ ಸೌಲಭ್ಯಗಳನ್ನು ಹೊಂದುವ ಕಾರ್ಯ ನಡೆಯುತ್ತಿದೆ. ಈ ಹತ್ತನೇ ಘಟಿಕೋತ್ಸವದಲ್ಲಿ 309 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 109 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಮತ್ತು 29 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ. ಇವರುಗಳಲ್ಲಿ 35 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕದೊಂದಿಗೆ ಗೌರವಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಂಡೆಪ್ಪ ಖಾಶೆಂಪೂರ, ಗೌರವಾನ್ವಿತ ಪಶುಸಂಗೋಪನಾ ಮತ್ತು ಮೀನುಗಾರಿಕೆ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ, ಕುಲಸಚಿವರಾದ ಪ್ರೊ.ಶಿವಶಂಕರ ಎಂ.ಉಸ್ತುರಗೆ ಹಾಗೂ ಮಹಾವಿದ್ಯಾಲಯದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.