
ಗುವಾಹತಿ/ಇಟಾನಗರ್ (ಪಿಟಿಐ), ಆ.31-ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಕಟ್ಟೆಚ್ಚರದ ಆದೇಶ ನೀಡಲಾಗಿದೆ. ಚೀನಾದ ಸ್ಯಾಂಗ್ಪೆÇ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವುದರಿಂದ ಈಶಾನ್ಯ ಪ್ರಾಂತ್ಯದ ಬ್ರಹ್ಮಪುತ್ರ ನದಿ ಭೋರ್ಗರೆಯುತ್ತಿದ್ದು, ನೆರೆ ಹಾವಳಿ ಆತಂಕ ಸೃಷ್ಟಿಯಾಗಿದೆ.
ದಕ್ಷಿಣ ಭಾರತದ ಕೇರಳ, ಕರ್ನಾಟಕದಲ್ಲಿ ಭೋರ್ಗರೆದು ಅಬ್ಬರಿಸಿ ಹಲವಾರು ಸಾವು-ನೋವು, ಅಪಾರ ಆಸ್ತಿ-ಪಾಸ್ತಿ ಹಾನಿಗೆ ಕಾರಣವಾದ ವಿನಾಶಕಾರಿ ಮಹಾಮಳೆ ಮತ್ತು ಪ್ರವಾಹದ ಅವಾಂತರದ ನಡುವೆ ಈಗ ಈಶಾನ್ಯ ಭಾರತದಲ್ಲಿ ಜಲಪ್ರಳಯ ಎದುರಿಸಲು ರಕ್ಷಣಾ ಸಿಬ್ಬಂದಿ ಸಜ್ಜಾಗಿದ್ದಾರೆ.
ಚೀನಾದ ಸ್ಯಾಂಗ್ಪೆÇ ನದಿಯಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಭೋರ್ಗರೆಯುತ್ತಿದೆ ಎಂದು ಚೀನಾ ಭಾರತಕ್ಕೆ ಮಾಹಿತಿ ನೀಡಿ ಬ್ರಹ್ಮಪುತ್ರ ಜಲಾನಯನ ಪ್ರದೇಶಕ್ಕೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿತ್ತು. ಇದರಿಂದಾಗಿ ಬ್ರಹ್ಮಪುತ್ರ ನದಿಗೆ 50 ವರ್ಷಗಳಲ್ಲೇ ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದುಬಂದಿದೆ.
ಇದರಿಂದಾಗಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಕಟ್ಟೆಚ್ಚರ ಘೋಷಿಸಲಾಗಿದೆ. ಎದುರಾಗಬಹುದಾದ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಸಜ್ಜಾಗಿದ್ದಾರೆ.