ಬೆಂಗಳೂರು,ಆ.31-ಲೇವಾದೇವಿಗಾರರ ಮೇಲೆ ರಾಜ್ಯ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಹಿಂಪಡೆಯಬೇಕೆಂದು ಅಖಿಲ ಕರ್ನಾಟಕ ಪೈನಾನ್ಸಿಯರ್ ಅಸೋಸಿಯೇಷನ್ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಟಿ.ರಾಜಶೇಖರ್, ಲೇವಾದೇವಿದಾರರಿಂದ ಪಡೆದ ಸಾಲವನ್ನು ಮನ್ನಾ ಮಾಡಲು ಸಿದ್ದಪಡಿಸಿರುವ ಸುಗ್ರೀವಾಜ್ಞೆ ಒಂದು ಕ್ಷೇತ್ರದ ಜನರಿಗೆ ಅನುಕೂಲವಾದರೆ ಮತ್ತೊಂದು ಕ್ಷೇತ್ರದ ಜನರಿಗೆ ಅನ್ಯಾಯವಾಗಲಿದೆ ಎಂದರು.
ರೈತರ ಕಷ್ಟ ಕಾಲದಲ್ಲಿ ಅವರಿಗೆ ಸಾಲಿ ನೀಡಿ ಅವರ ಬದುಕಿಗೆ ಸಹಕರಿಸುವುದೇ ತಪ್ಪು ಎನ್ನುವ ರೀತಿಯಲ್ಲಿ ಸರ್ಕಾರ ವರ್ತಿಸುತ್ತಿದೆ. ಸರ್ಕಾರದಿಂದಲೇ ಪರವಾನಗಿ ಪಡೆದು ಅಧಿಕೃತವಾಗಿ ವ್ಯವಹಾರ ನಡೆಸಲಾಗಿದೆ. ಸರ್ಕಾರದ ನಿಯಮದಂತೆ ಶುಲ್ಕ ತೆರಿಗೆಯನ್ನು ಭರಿಸಲಾಗಿದೆ. ಆದರೂ ನಮ್ಮ ಮೇಲೆ ಸರ್ಕಾರ ನಡೆಸುತ್ತಿರುವ ಗದಾಪ್ರಹಾರ ಸರಿಯಲ್ಲ ಎಂದು ಹೇಳಿದರು.
ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ. ಮಲತಾಯಿ ಧೋರಣೆ ಮಾಡಿದಂತಾಗಿದೆ ಎಂದು ಆರೋಪಿಸಿದರು.
ಲೇವಾದೇವಿದಾರರು ಬಲಿಪಶುಗಳಾಗಿದ್ದಾರೆ. ಅವರು ಆತ್ಮಹತ್ಯೆಗೆ ಶರಣಾದರೆ ಅದಕ್ಕೆ ಸರ್ಕಾರವೇ ಹೊಣೆ. ಹೀಗಾಗದಂತೆ ಸರ್ಕಾರ ಸುಗ್ರೀವಾಜ್ಞೆಯನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.