ಬೆಂಗಳೂರು,ಆ.31- ಸಾಮಾನ್ಯ ಸಭೆ ಮತ್ತು ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳದಿರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮುನಿರಾಜು ಎಚ್ಚರಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಇಂದು ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಜಿಪಂನ ಕಾಮಗಾರಿಗಳನ್ನು ಆಯಾಯಾ ಕ್ಷೇತ್ರದ ಸದಸ್ಯರು ಗಮನಹರಿಸಬೇಕು. ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಬೇಕು. ಜನರಿಗೆ ಸ್ಪಂದಿಸುವಂತಹ ಕೆಲಸಗಳು ನಡೆಯಬೇಕು ಎಂದರು.
ಇದಕ್ಕೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ದೂರು ನೀಡಿ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಿದರು.
ಕೃಷಿ ಇಲಾಖೆ(ಜಂಟಿ)ಯ ನಿರ್ದೇಶಕ(ಎಸ್ಡಿ) ಗಿರೀಶ್ ಮಾತನಾಡಿ, ನಾನು ಇಲ್ಲಿಗೆ ವರ್ಗಾವಣೆಗೊಂಡು ಇನ್ನು ಎರಡು ತಿಂಗಳು ಮಾತ್ರ ಆಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ 30 ಮಿ.ಮೀ ಮಳೆಯಾಗಿದೆ. ಜುಲೈ, ಆಗಸ್ಟ್ ತಿಂಗಳಿನಲ್ಲಿ ಬಿತ್ತನೆ ಕಾರ್ಯ ಶುರು ಮಾಡುತ್ತೇವೆ. ಶೇ.40ರಷ್ಟು ರೈತರು ರಾಗಿ ಬೆಳೆ ಬಿತ್ತನೆ ಮಾಡಿದ್ದಾರೆ. ಆಗಸ್ಟ್ತಿಂಗಳಲ್ಲಿ ಹವಾಮಾನ ಇಲಾಖೆ ಪ್ರಕಾರ 102 ಮಿ.ಮೀ ಮಳೆಯಾಗಬೇಕಿತ್ತು. ಆದರೆ 60 ಮಿ.ಮೀ ಮಳೆಯಾಗಿದೆ. ಇದರಿದ ಬರಗಾಲ ಆವರಿಸುತ್ತವೆ ಎಂಬ ಭಯವಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಗೆ ಸುಮಾರು 2,200 ಕ್ವಿಂಟಾಲ್ ರಾಗಿ ಅವಶ್ಯಕತೆ ಇದ್ದು, 1,200 ಕ್ವಿಂಟಾಲ್ ರಾಗಿ ದೊರಕಿದೆ. ಇದಕ್ಕೆ ಸಂಬಂಧಪಟ್ಟಂತೆ ರಸಗೊಬ್ಬರವು ನಮ್ಮ ಇಲಾಖೆಯಿಂದ ಕಳುಹಿಸಿಕೊಟ್ಟಿದೆ. ಯಾವುದೇ ಕೊರತೆ ಕಾಣುತ್ತಿಲ್ಲ ಎಂದರು.
ಫಸಲ್ ಭೀಮಾ ಯೋಜನೆಯು ರೈತರಿಗೆ ಸರಿಯಾಗಿ ತಲಪುತ್ತಿಲ್ಲ ಎಂದು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿರಾಜು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಕೃಷಿ ಇಲಾಖೆಯಲ್ಲಿ ಟಾರ್ಪಲ್ ಔಷಧಿಗಳು ರಸಗೊಬ್ಬರಗಳು ಇನ್ನೂ ಅನೇಕ ಕಾರ್ಯಕ್ರಮಗಳು ಇವೆ. ಇವು ಸಮರ್ಪಕವಾಗಿ ರೈತರಿಗೆ ತಲುಪುತ್ತಿಲ್ಲ ಎಂದು ಹೇಳಿದರು.
ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರ್ಚನಾ, ಉಪಾಧ್ಯಕ್ಷೆ ಪಾರ್ವತಿ ಚಂದ್ರಪ್ಪ ಮತ್ತಿತರ ಅಧಿಕಾರಿಗಳು, ಸದಸ್ಯರು ಪಾಲೊಗಂಡಿದ್ದರು.