ಬೆಂಗಳೂರು, ಆ.31-ಉದ್ಯಾನನಗರಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನೊಂದಿಗೆ ಹೋರಾಡುತ್ತಿದ್ದಾರೆ. ಇಂಥ ಅಪಘಾತ ಸಂತ್ರಸ್ತರ ದುಬಾರಿ ವೈದ್ಯಕೀಯ ಚಿಕಿತ್ಸೆಗೆ ನೆರವಾಗಲು ನಗರದ ಮಿಲಾಪ್ ಸಂಸ್ಥೆ ಕೈಜೋಡಿಸಿದೆ.
ಅಪಘಾತ ಸಂತ್ರಸ್ತರಿಗೆ ಅಗತ್ಯವಾದ ವೈದ್ಯಕೀಯ ಚಿಕಿತ್ಸೆಗೆ ನೆರವಾಗಲು ಸಹಾಯ ಮಾಡುತ್ತಿರುವ ಮಿಲಾಪ್ ಸಂಸ್ಥೆಯ ಸೇವೆ ಜನಮನ್ನಣೆಗೆ ಪಾತ್ರವಾಗಿದೆ.
ಕಳೆದ ಏಪ್ರಿಲ್ 1ರಂದು ಬಾಣಸವಾಡಿಯ ಬಿಗ್ ಬಜಾರ್ ಬಳಿ ಅಕ್ಸೆಂಚರ್ ಸಂಸ್ಥೆಯ ಸಾಫ್ಟ್ವೇರ್ ಎಂಜಿನಿಯರ್ ಪವಿತ್ರಾ ಭೀಕರ ಅಪಘಾತಕ್ಕೆ ಒಳಗಾಗಿ ಜೀವನ್ಮರಣದೊಂದಿಗೆ ಹೋರಾಡುತ್ತಿದ್ದಾರೆ. ಮಹಾನಗರ ಪಾಲಿಕೆಯ ನಿರ್ಲಕ್ಷದಿಂದಾಗಿ ರಸ್ತೆಯಲ್ಲಿದ್ದ ಕೇಬಲ್ ತಂತಿಯು ಪವಿತ್ರಾ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಸಿಲುಕಿ ಅವರು ಕಂಬವೊಂದಕ್ಕೆ ಅಪ್ಪಳಿಸುವಂತಾಯಿತು. ತಲೆ ಹಾಗೂ ಮುಖಕ್ಕೆ ತೀವ್ರ ಪೆಟ್ಟು ಬಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು.
ತಲೆ ಮತ್ತು ಮುಖದ ಮೂಳೆಗಳು ಹಾಗೂ ಕಣ್ಣಿಗೆ ತೀವ್ರ ಪೆಟ್ಟು ಬಿದ್ದು ಆಕೆಯ ದುಬಾರಿ ಚಿಕಿತ್ಸೆಯ ಅಗತ್ಯವಿತ್ತು. ಪವಿತ್ರಾ ಆಕೆಯ ಕುಟುಂಬದ ಏಕೈಕ ಆಧಾರ. ತಂದೆ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಾಯಿ ಬಹಳ ಕಷ್ಟ ಪಟ್ಟು ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದರು.ಈಗ ಪವಿತ್ರಾ ಸಾವು-ಬದುಕಿನೊಂದಿಗೆ ಹೋರಾಡುತ್ತಿರುವುದರಿಂದ ಕುಟುಂಬ ಕಂಗಾಲಾಗಿದೆ. ದುಬಾರಿ ಚಿಕಿತ್ಸೆ ಕೊಡಿಸಲು ಆರ್ಥಿಕ ಸಮಸ್ಯೆಯಿಂದಾಗಿ ಕುಟುಂಬ ಹೆಣಗಾಡುತ್ತಿದ್ದಾಗ ಮಿಲಾಪ್ ಸಂಸ್ಥೆ ನೆರವಿಗೆ ಧಾವಿಸಿತು.
ತಮ್ಮ ಸಾಮಾಜಿಕ ಜಾಲತಾಣದ ವೇದಿಕೆ ಮೂಲಕ ಪವಿತ್ರಾ ಸ್ಥಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿತು. ಅಲ್ಲದೇ ಚಿಕಿತ್ಸೆಗೆ ಅಗತ್ಯವಾದ ಹಣ ಕ್ರೋಢೀಕರಿಸುವ ಕಾರ್ಯದಲ್ಲಿ ತೊಡಗಿತು. ಈ ಸಂಸ್ತೆಯ ಶ್ರಮದ ಫಲವಾಗಿ 1,800ಕ್ಕೂ ಹೆಚ್ಚು ದಾನಿಗಳು ಅಪಘಾತ ಸಂತ್ರಸ್ತೆಯ ನೆರವಿಗೆ ಧಾವಿಸಿದ್ದಾರೆ. ಆಕೆಯ ಜೀವ ಉಳಿಸಲು ಅಗತ್ಯವಾದ ನೆರವು ನೀಡಲು ಸಹಾಯ ಹಸ್ತಚಾಚಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಗಂಭೀರ ಅಪಘಾತಗಳಲ್ಲಿ ಅನೇಕರು ಗಾಯಗೊಳ್ಳುತ್ತಿದ್ದಾರೆ. ಅವರಿಗೆ ತುರ್ತು ಚಿಕಿತ್ಸೆ ಮತ್ತು ಅದಕ್ಕೆ ತಗಲುವ ವೆಚ್ಚವನ್ನು ಭರಿಸುವುದು ಅನಿವಾರ್ಯ. ಈ ನಿಟ್ಟನಲ್ಲಿ ನಮ್ಮ ವೇದಿಕೆ ಮೂಲಕ ನಾವು ನೆರವಾಗುತ್ತಿದ್ದೇವೆ. ಜನರು ಮತ್ತು ದಾಳಿಗಳೂ ಕೂಡ ಇದಕ್ಕೆ ಕೈಜೋಡಿಸಬೇಕೆಂದು ಮಿಲಾಪ್ ಅಧ್ಯಕ್ಷ ಹಾಗೂ ಸಹ ಸಂಸ್ಥಾಪಕ ಅನೋಜ್ ವಿಶ್ವನಾಥನ್ ಕೋರಿದ್ದಾರೆ.