ಬೆಂಗಳೂರು, ಆ.31- ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ತುಂಬಿದ ಹಿನ್ನೆಲೆಯಲ್ಲಿ ನಾಲ್ಕನೆ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ.
ನಿಗಮ ಮಂಡಳಿಗಳ ನೇಮಕಾತಿ, ಸಂಪುಟ ವಿಸ್ತರಣೆ, ಸಾಲ ಮನ್ನಾ, ಲೇವಾದೇವಿ ತಿದ್ದುಪಡಿ ಕಾಯ್ದೆ, ಎರಡೂ ಪಕ್ಷಗಳ ಸಚಿವರ ನಡುವಿನ ಸಮನ್ವಯ ಕೊರತೆಯ ಮಾಹಿತಿ ವಿನಿಮಯ, ಕಾವೇರಿದ ಚರ್ಚೆಗಳು ನಡೆದಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ದೆಹಲಿಗೆ ಭೇಟಿ ನೀಡಿ ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ, ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.
ರಾಹುಲ್ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಕುಮಾರಸ್ವಾಮಿ ಅವರು ನಿಗಮ ಮಂಡಳಿಗಳಿಗೆ ನೇಮಕಾತಿ ಕುರಿತು ಚರ್ಚೆ ನಡೆಸಿದ್ದಾರೆ.
ರಾಜನಾಥ್ಸಿಂಗ್ ಅವರ ಭೇಟಿ ವೇಳೆ ಕೊಡಗು ಹಾಗೂ ಮಲೆನಾಡು ಭಾಗದ ಮಳೆ ಅನಾಹುತಗಳ ಪರಿಹಾರ ಕಾರ್ಯಕ್ಕಾಗಿ ಹಣ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅದಕ್ಕೆ ಕೇಂದ್ರ ಸರ್ಕಾರದಿಂದ ಸಿಕ್ಕಿರುವ ಭರವಸೆಗಳು, ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ನೇಮಕಾತಿ ಕುರಿತು ರಾಹುಲ್ಗಾಂಧಿ ಅವರ ಅಭಿಪ್ರಾಯಗಳ ಕುರಿತು ಇಂದು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು.
ಮಳೆ ಅನಾಹುತದಿಂದ ಸಂತ್ರಸ್ತವಾಗಿರುವ ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಅಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಗಳನ್ನು ಖುದ್ದಾಗಿ ವೀಕ್ಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಆಕಾಂಕ್ಷಿ ಶಾಸಕರಿಗೆ ವರಿಷ್ಠರು ಭರವಸೆ ನೀಡುತ್ತಾ ಬಂದಿದ್ದರು. ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಮುಗಿಯಲಿದ್ದು, ಸಂಪುಟ ವಿಸ್ತರಣೆಯನ್ನು ಕೈಗೆತ್ತಿಕೊಳ್ಳಬೇಕೋ ಅಥವಾ ಲೋಕಸಭೆ ಚುನಾವಣೆಯವರೆಗೂ ಸಮಯ ಮುಂದೂಡಬೇಕೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳ ಸಚಿವರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಇಲಾಖಾವಾರು ಕೆಲಸಗಳು ನೆನೆಗುದಿಗೆ ಬಿದ್ದಿದ್ದು, ಅಭಿವೃದ್ಧಿ ಕೆಲಸಗಳು ಜನರಿಗೆ ತಲುಪುತ್ತಿಲ್ಲ. ಸಾಲ ಮನ್ನಾದಂತಹ ಪ್ರಮುಖ ಯೋಜನೆಯನ್ನು ಘೋಷಣೆ ಮಾಡಲಾಗಿದೆಯಾದರೂ ಅದು ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಕೆಲವು ಕಡೆ ಬ್ಯಾಂಕುಗಳು ಯೋಜನೆ ಅನುಷ್ಠಾನಕ್ಕೆ ಹಿಂದೇಟು ಹಾಕಿರುವುದು ಸರ್ಕಾರಕ್ಕೆ ತಲೆಬಿಸಿಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳನ್ನು ಹೇಗೆ ಸರಿದಾರಿಗೆ ತರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಖಾಸಗಿ ಲೇವಾದೇವಿ ಕಾಯ್ದೆಯನ್ನು ಸಚಿವ ಸಂಪುಟ ಸಭೆಯಲ್ಲಿ ಏಕಾಏಕಿ ಮಂಡನೆ ಮಾಡಿ ಸುಗ್ರೀವಾಜ್ಞೆ ರೂಪಿಸಲು ಮುಂದಾಗಿದೆ. ಈ ವಿಷಯವಾಗಿ ಸಮಗ್ರ ಚರ್ಚೆ ನಡೆಸುವ ಅಗತ್ಯ ಇತ್ತು ಎಂಬ ಅಭಿಪ್ರಾಯ ಕಾಂಗ್ರೆಸ್ ವಲಯದಲ್ಲಿದೆ. ಈ ನಿಟ್ಟಿನಲ್ಲೂ ಇಂದು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಗಳಿವೆ.
ವಿರೋಧಪಕ್ಷಗಳು ಸರ್ಕಾರ ಪತನಕ್ಕೆ ಡೆಡ್ಲೈನ್ ಹೇಳುತ್ತಿರುವ ಬಗ್ಗೆ ಮತ್ತು ಅಪಪ್ರಚಾರಗಳಿಗೆ ತಕ್ಕ ಉತ್ತರ ನೀಡುವ ಬಗ್ಗೆಯೂ ಸಮನ್ವಯ ಸಮಿತಿಯಲ್ಲಿ ಪ್ರಮುಖರು ಚರ್ಚೆ ನಡೆಸಲಿದ್ದಾರೆ.