ಬೆಂಗಳೂರು, ಆ.31- ಬಿಬಿಎಂಪಿಯ ಗಾಜಿನ ಮನೆಯಲ್ಲಿ ನಾಳೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ನಡೆಯಲಿದೆ.
ವಿಶ್ವ ಪ್ರಸಿದ್ಧ ಬೆಂಗಳೂರು ಕರಗದ ಸಮಯದಲ್ಲೇ ನಾಡಪ್ರಭು ಕೆಂಪೇಗೌಡರ ಜಯಂತಿ ಸಮಾರಂಭ ಹಮ್ಮಿಕೊಂಡು ಪ್ರಶಸ್ತಿ ಪ್ರದಾನ ಮಾಡಲಾಗುತಿತ್ತು. ಈ ಬಾರಿ ವಿಧಾನಸಭೆ ಚುನಾವಣೆ ಎದುರಾದುದ್ದರಿಂದ ಸಮಾರಂಭವನ್ನು ಮುಂದೂಡಲಾಗಿತ್ತು.
ಮತ್ತೆ ದಿನಾಂಕ ನಿಗದಿ ಮಾಡಿದ ವೇಳೆ ಚನ್ನೈ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ನಿಧನಹೊಂದಿದ್ದರಿಂದ ಸಮಾರಂಭ ಮುಂದೂಡಲಾಗಿತ್ತು. ಮತ್ತೆ ಕೆಂಪೇಗೌಡರ ಜಯಂತಿ ಆಚರಣೆ ಮಾಡಿದ ವೇಳೆ ಸಂಜೆಗೆ ಮಾಜಿ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರ ನಿಧನ ವಾರ್ತೆ ಬಂದಿದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು.
ಹಾಗಾಗಿ ನಾಳೆ ಸಂಜೆ ಗಾಜಿನ ಮನೆಯಲ್ಲಿ ಅರಗಿಣಿ ಪತ್ರಿಕೆಯ ವಿಶೇಷ ಪ್ರತಿನಿಧಿ ಎನ್.ಎಸ್.ರಾಮಚಂದ್ರ, ನಟರಾದ ರಮೇಶ್ ಅರವಿಂದ್, ಕಿಚ್ಚ ಸುದೀಪ್ ಸೇರಿದಂತೆ 375 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವರು.
ನಾಳೆ ಮಧ್ಯಾಹ್ನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.