ಬೆಂಗಳೂರು, ಆ.31- ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ಸೆ.2ರಂದು ಬೆಳಗ್ಗೆ 9.30ಕ್ಕೆ ಪರಿಸರ ಜಾಗೃತಿ ಜಾಥಾ ಮತ್ತು ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆ ನಡೆಸಿ ನಿಧಿ ಸಂಗ್ರಹ ಮಾಡಲಿದೆ.
ಕಾವೇರಿ ಉಗಮ ಸ್ಥಳ ಕೊಡಗಿನ ಪುನರ್ ನಿರ್ಮಾಣಕ್ಕೆ ಸರ್ಕಾರದ ಜತೆಗೆ ಹಲವಾರು ಸಂಘ-ಸಂಸ್ಥೆಗಳು ಕೈ ಜೋಡಿಸಿ ಶ್ರೀಮಠದ ಸದ್ಭಕ್ತರೆಲ್ಲರೂ ಕಾಯಾ, ವಾಚಾ, ಮನಸಾ ನೆರೆ ಸಂತ್ರಸ್ತರಿಗೆ ನೆರವಾಗಬೇಕಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಲು ಮತ್ತು ನಿಧಿ ಸಂಗ್ರಹಿಸಲು 2ರಂದು ಬೆಳಗ್ಗೆ ವಿಜಯನಗರದ ಶ್ರೀಮಠದ ಆವರಣದಿಂದ ಮಾರುತಿ ಮಂದಿರದವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಪ್ರಾಕೃತಿಕ ಸೌಂದರ್ಯದ ನೆಲೆಬೀಡಾದ ಕೊಡಗಿನಲ್ಲಿ ಅಕಾಲಿಕ ಮಹಾಮಳೆಯಿಂದಾಗಿ ಅಪಾರ ನಷ್ಟ ಉಂಟಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ, ಬದುಕು ದುಸ್ತರವಾಗಿದೆ. ಅಲ್ಲದೆ, ಪ್ರಾಣಿ ಸಂಕುಲ, ಸಸ್ಯ ಸಂಕುಲ ವಿನಾಶವಾಗಿದ್ದು, ಸಾವಿರಾರು ರೈತ ಕುಟುಂಬಗಳು ನಿರಾಶ್ರಿತವಾಗಿವೆ. ಹಾಗಾಗಿ ನಿಧಿ ಸಂಗ್ರಹದ ಪಾದಯಾತ್ರೆಯಲ್ಲಿ ಎಲ್ಲ ಧರ್ಮ ಗುರುಗಳು, ಸಾಧು-ಸಂತರು, ಸರ್ವ ಪಕ್ಷಗಳ ಧುರೀಣರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.