ಬೆಂಗಳೂರು, ಆ.31- ಎರಡು ಕಡೆ ಮತದಾರರ ಪಟ್ಟಿಯಲ್ಲಿ ಸುದ್ದಿ ಹೊಂದಿರುವ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ.
ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆಯುಕ್ತರನ್ನು ಭೇಟಿ ಮಾಡಿ ದಾಖಲೆ ಸಮೇತ ದೂರು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇಬ್ರಾಹಿಂ ಅವರು ಭದ್ರಾವತಿಯ ಅನ್ವರ್ ಕಾಲೋನಿಯ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು, ಜತೆಗೆ ಬೆಂಗಳೂರಿನ ಜೆ.ಸಿ.ನಗರದಲ್ಲೂ ಸಹ ಜನವರಿ ತಿಂಗಳಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ. ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಜನಪ್ರತಿನಿಧಿಗಳೇ ಈ ರೀತಿ ಮಾಡುವುದು ಸರಿಯಲ್ಲ. ಅಲ್ಲದೆ ರಾಜಕೀಯವಾಗಿ ಹಿರಿಯರು. ಇಂತಹ ಕೆಲಸವ ಅವರಿಗೆ ಶೋಭೆ ತರುವುದಿಲ್ಲ ಎಂದು ದೂರಿದರು.
ಕಾಂಗ್ರೆಸ್ ಮೊದಲಿನಿಂದಲೂ ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಕೆಲಸ ಮಾಡುತ್ತಿದೆ. ಪಾಲಿಕೆಯಲ್ಲೂ ಸಹ ಅಧಿಕಾರ ಹಿಡಿದಿದೆ. ಈಗ ಮತದಾರರ ಪಟ್ಟಿಯಲ್ಲಿ ಎರಡೆರಡು ಕಡೆ ಹೆಸರನ್ನು ನೊಂದಾಯಿಸಲಾಗಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.