ಬೆಂಗಳೂರು, ಆ.31-ಗೃಹ, ಬೆಂಗಳೂರು ನಗರಾಭಿವೃದ್ಧಿ ಸಚಿವರೂ, ಉಪಮುಖ್ಯಮಂತ್ರಿಯಾದ ಡಾ.ಜಿ.ಪರಮೇಶ್ವರ್ ಇಂದು ಬೆಳ್ಳಂಬೆಳಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಶಾಕ್ ನೀಡಿದರು.
ಬಿಬಿಎಂಪಿ ದಾಸರಹಳ್ಳಿ ವಲಯ ಜಂಟಿ ಆಯುಕ್ತರ ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ತಡವಾಗಿ ಬಂದ ಅಧಿಕಾರಿಗಳು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಇವರು ಭೇಟಿ ನೀಡಿದ ಸಂದರ್ಭದಲ್ಲಿ ಹಾಜರಿರದ ಜಂಟಿ ಆಯುಕ್ತರ ವಿರುದ್ಧ ಗರಂ ಆದರು.
ಸ್ಪಷ್ಟನೆ ಕೋರಿದಾಗ ನ್ಯಾಯಾಲಯಕ್ಕೆ ತೆರಳಿದ್ದಾರೆ ಎಂದು ಹೇಳಿದರು.
ದೂರವಾಣಿ ಕರೆ ಮಾಡಿದರೂ ಅವರು ಸಿಗಲಿಲ್ಲ. ಬೆಳಗ್ಗೆ 10.30ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸತತವಾಗಿ ಹಾಜರಾತಿ ಪುಸ್ತಕದಿಂದ ಹಿಡಿದು ಎಲ್ಲಾ ದಾಖಲೆಗಳನ್ನು ಪರಮೇಶ್ವರ್ ಕೂಲಂಕಷವಾಗಿ ಪರಿಶೀಲನೆ ಮಾಡಿ ಅಧಿಕಾರಿಗಳ ಚಳಿ ಬಿಡಿಸಿದರು.
ಈ ವಲಯಕ್ಕೆ ಸಂಬಂಧಪಟ್ಟ ದಾಖಲೆಗಳನ್ನಿಟ್ಟುಕೊಂಡು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಅವರು, ಬಿಡುಗಡೆಯಾದ ಅನುದಾನವೆಷ್ಟು, ಮಾಡಿರುವ ಕಾಮಗಾರಿಗಳೇನು, ಸಂಭಾವ್ಯ ಮಳೆ ಹಾನಿ ತಡೆಯಲು ಕೈಗೊಂಡಿರುವ ಕ್ರಮಗಳೇನು, ವಲಯ ಕಚೇರಿಗೆ ಮೇಯರ್-ಉಪಮೇಯರ್ ಎಷ್ಟು ಬಾರಿ ಬಂದಿದ್ದಾರೆ, ಅಧಿಕಾರಿ, ಸಿಬ್ಬಂದಿಗಳು ಕಚೇರಿಯಲ್ಲಿ ಎಷ್ಟು ಗಂಟೆ ಇರುತ್ತಾರೆ, ಸಾರ್ವಜನಿಕರಿಗೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬ ಇತ್ಯಾದಿ ಮಾಹಿತಿಗಳನ್ನು ಪಡೆದು ನಿರ್ಲಕ್ಷ್ಯ ಮಾಡುವ ಸಿಬ್ಬಂದಿ ಮೇಲೆ ಹರಿಹಾಯ್ದರು.
ದಾಸರಹಳ್ಳಿ ವಲಯದಲ್ಲಿ ಕಾಮಗಾರಿಗಳು ವಿಳಂಬವಾಗುತ್ತಿರುವುದೇಕೆ? ಬರುತ್ತಿರುವ ದೂರುಗಳೆಷ್ಟು, ಚರಂಡಿ ಕಾಮಗಾರಿಗಳ ಬಗ್ಗೆ ನಿರಂತರ ದೂರುಗಳು ಕೇಳಿ ಬರುತ್ತಿರುವುದೇಕೆ? ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ಎಂದು ಪರಮೇಶ್ವರ್ ಲೆಫ್ಟ್-ರೈಟ್ ತೆಗೆದುಕೊಳ್ಳುತ್ತಿದ್ದಂತೆ ಉತ್ತರ ನೀಡಲು ಇಲ್ಲಿನ ಇಂಜಿನಿಯರ್ಗಳು ತಡಬಡಾಯಿಸಿದರು.
ಏನೋ ಕಾಲ ಹಾಕಿದರೆ ಆಯಿತು, ಏನೋ ಮಾಡಿದರಾಯಿತು ಎಂಬ ಧೋರಣೆಯನ್ನು ಮೊದಲು ಕೈಬಿಡಿ. ರೂಪುರೇಷೆ ಹಾಕಿಕೊಂಡು ಕೆಲಸ ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಬೇಕಾಗುತ್ತದೆ ಎಂಬ ಎಚ್ಚರವನ್ನು ಮುಖ್ಯಮಂತ್ರಿಗಳು ಹೇಳಿದರು.
ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರೆಂದು ಉಪಮುಖ್ಯಮಂತ್ರಿಗಳು ಕಚೇರಿಗೆ ಭೇಟಿ ನೀಡಿದಾಗ ಬಹುತೇಕ ಸಿಬ್ಬಂದಿಗಳೇ ಇರಲಿಲ್ಲ. ಬಂದವರು ಬಂದಂತೆ ಹಾಜರಿ ಪುಸ್ತಕವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ 15-20 ನಿಮಿಷ ತಡವಾಗಿ ದಡಬಡಾಯಿಸಿ ಕಚೇರಿಗೆ ಬಂದಾಗ ಸಚಿವರು ಅವರನ್ನು ತರಾಟೆಗೆ ತೆಗೆದುಕೊಂಡರು.
ಮಧ್ಯಾಹ್ನ 2 ಗಂಟೆಯಾದರೂ ಪರಮೇಶ್ವರ್ ಅವರು ಪರಿಶೀಲನೆಯನ್ನು ಮುಂದುವರೆಸಿಯೇ ಇದ್ದರು.