ಬೆಂಗಳೂರು, ಆ.30-ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರನ್ನು ಬಿಜೆಪಿ ತನ್ನತ್ತ ಸೆಳೆಯಲು ಮುಂದಾಗಿದೆ.
2019ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸಂಸದೀಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ರತ್ನಪ್ರಭಾ ಅವರನ್ನು ಕಣಕ್ಕಿಳಿಸಿ ಪ್ರಬಲ ಸ್ಪರ್ಧೆ ಒಡ್ಡುವುದು ಬಿಜೆಪಿಯ ಲೆಕ್ಕಾಚಾರ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಮರುಳೀಧರರಾವ್ ಸೇರಿದಂತೆ ಹಲವು ನಾಯಕರ ಜತೆ ರತ್ನಪ್ರಭಾ ಮಾತುಕತೆ ನಡೆಸಿದ್ದು, ಅವರ ಸೇರ್ಪಡೆಗೆ ಆರ್ಎಸ್ಎಸ್ ನಾಯಕರೂ ಹಸಿರು ನಿಶಾನೆ ತೋರಿದ್ದಾರೆ.
ಈ ಹಿಂದೆ ರಾಜ್ಯದ ವಿವಿಧೆಡೆ ಐಎಎಸ್ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ರತ್ನಪ್ರಭಾ ಅವರದೇ ಆದ ವರ್ಚಸ್ಸು ಮತ್ತು ಪ್ರಭಾವ ಹೊಂದಿದ್ದಾರೆ.
ಕಲಬುರಗಿಯಲ್ಲಿ ಖರ್ಗೆ ಎದುರು ಪ್ರಭಾವಿ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅನಿವಾರ್ಯತೆ ಬಿಜೆಪಿಗಿದೆ. ಹೀಗಾಗಿ ಅವರನ್ನು ಪಕ್ಷಕ್ಕೆ ಸೆಳೆಯಲು ಖುದ್ಧು ಯಡಿಯೂರಪ್ಪ ಸಹ ವಿಶೇಷ ಆಸಕ್ತಿ ವಹಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಹ ರತ್ನಪ್ರಭಾ ಅಂತಹವರನ್ನು ಬಿಜೆಪಿಗೆ ಕರೆ ತಂದರೆ ಮಹಿಳಾ ಮತದಾರರನ್ನು ಪಕ್ಷಕ್ಕೆ ಸೆಳೆಯುವ ಜತೆಗೆ ದಲಿತ ಮತಗಳನ್ನು ಇನ್ನಷ್ಟು ಪಡೆದುಕೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಪ್ರಬಲ ಸ್ಪರ್ಧೆ ಒಡ್ಡುವಂತಹ ಅಭ್ಯರ್ಥಿಗಳು ಬಿಜೆಪಿಯಲ್ಲಿ ಇಲ್ಲ. ಈ ಹಿಂದೆ 2009 ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ರೇವೂನಾಯಕ್ ಬೆಳಮಗಿ ಸ್ಪರ್ಧಿಸಿ ಪ್ರಬಲ ಸ್ಪರ್ಧೆ ಒಡ್ಡಿದ್ದರು. ಆದರೆ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರೇವೂ ನಾಯಕ ಬೆಳಮಗಿ ಕಲಬುರ್ಗಿ ಮೀಸಲು ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಪಕ್ಷವು ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಬಿಜೆಪಿ ತೊರೆದು ಜೆಡಿಎಸ್ಗೆ ಸೇರ್ಪಡೆಯಾದರು. ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಪುನಃ ಬಿಜೆಪಿಗೆ ಸೇರುವ ಲಕ್ಷಣಗಳಿಲ್ಲ. ಇವೆಲ್ಲವನ್ನು ಲೆಕ್ಕ ಹಾಕಿರುವ ಬಿಜೆಪಿ ನಾಯಕರು ರತ್ನಪ್ರಭಾ ಅವರನ್ನು ಕರೆತಂದು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಬಿಜೆಪಿ ವಿರುದ್ಧ ಭುಸುಗುಡುತ್ತಿರುವ ಖರ್ಗೆಗೆ ಸೋಲಿನ ರುಚಿ ಕಾಣಿಸಲು ಕಾರ್ಯತಂತ್ರ ಹೆಣೆದಿದ್ದಾರೆ. ಈಗಾಗಲೇ ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ಮಾಜಿ ಶಾಸಕ ಮಾಲೀಕಯ್ಯಗುತ್ತೇದಾರ್ ಸೇರಿದಂತೆ ಅನೇಕರನ್ನು ಪಕ್ಷಕ್ಕೆ ಕರೆತರಲಾಗಿದೆ.
ಮುಂದಿನ ದಿನಗಳಲ್ಲಿ ಕಲಬುರಗಿ ಸೇರಿದಂತೆ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರನ್ನು ಬಿಜೆಪಿಗೆ ಸೆಳೆಯಲು ಪಕ್ಷ ಮುಂದಾಗಿದೆ.