ಮೈತ್ರಿ ಸರ್ಕಾರಕ್ಕೆ 100 ದಿನ ಪೂರ್ಣ: ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ.ಜಿ.ಪರಮೇಶ್ವರ್ ರಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ

ಬೆಂಗಳೂರು, ಆ.30- ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ 100 ದಿನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಸರ್ಕಾರದ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.

ನಿನ್ನೆ ಸಂಜೆ ದೆಹಲಿಗೆ ತೆರಳಿದ್ದ ಅವರು, ಇಂದು ಬೆಳಗ್ಗೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ, ಸಣ್ಣ ವ್ಯಾಪಾರಿಗಳ ಅನುಕೂಲಕ್ಕಾಗಿ ಮೊಬೈಲ್ ಬ್ಯಾಂಕಿಂಗ್ ಸಾಲ ಸೌಲಭ್ಯ, ಹಿರಿಯ ನಾಗರಿಕರ ವೃದ್ಧಾಪ್ಯವೇತನ ಹೆಚ್ಚಳ, ಗರ್ಭಿಣಿ ಯರಿಗೆ ಸಹಾಯಧನ, ಋಣಮುಕ್ತ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದು, ಬೆಂಗಳೂರು ನಗರವನ್ನು ಫ್ಲೆಕ್ಸ್ ಮುಕ್ತಗೊಳಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಸೇರಿದಂತೆ ಕಳೆದ 100 ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಕೈಗೊಂಡಿರುವ ಮಹತ್ವದ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ವಿರೋಧ ಪಕ್ಷವಾದ ಬಿಜೆಪಿಯ ಟೀಕಾಪ್ರಹಾರ, ಸಮ್ಮಿಶ್ರ ಸರ್ಕಾರದ ಇಕ್ಕಟ್ಟು ಬಿಕ್ಕಟ್ಟಿನ ನಡುವೆ ಸರ್ಕಾರವನ್ನು ಮುನ್ನಡೆಸುವ ಸವಾಲು, ಕಾಂಗ್ರೆಸ್ ಶಾಸಕರಿಂದ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ವಿಚಾರದಲ್ಲಿ ಹೆಚ್ಚುತ್ತಿರುವ ಒತ್ತಡ ಮೊದಲಾದ ವಿಚಾರಗಳ ಬಗ್ಗೆ ಉಭಯ ನಾಯಕರು ಗಂಭೀರ ಚರ್ಚೆ ನಡೆಸಿದ್ದಾರೆ.

ರಾಜ್ಯದಲ್ಲಿ ನೆರೆ, ಬರ ಪರಿಸ್ಥಿತಿ, ದಿನನಿತ್ಯ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕೋರಿ ನೂರಾರು ಸಾರ್ವಜನಿಕರು ಮುಖ್ಯಮಂತ್ರಿ ಬಳಿಗೆ ಬರುತ್ತಿರುವ ವಿಚಾರ ಮತ್ತಿತರ ವಿಷಯಗಳ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದಾರೆ. ಮಂಡ್ಯದಲ್ಲಿ ರೈತರಿಗೆ ಧೈರ್ಯ ತುಂಬಲು ಗದ್ದೆಗಿಳಿದು ನಾಟಿ ಮಾಡಿರುವುದು ಅಷ್ಟೇ ಅಲ್ಲ ರೈತರ ಹಿತ ಕಾಪಾಡಲು ಮುಂದೆ ಸರ್ಕಾರ ಕೈಗೊಳ್ಳಲಿರುವ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರ ಅಪಸ್ವರ, ಭಿನ್ನ ರೀತಿಯ ಹೇಳಿಕೆಗಳಿಂದ ಸರ್ಕಾರಕ್ಕೆ ಆಗುತ್ತಿರುವ ಮುಜುಗರದ ವಿಚಾರವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿಯವರು, ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿಯೂ ಈ ಸಮ್ಮಿಶ್ರ ಸರ್ಕಾರದ ಉಭಯ ಪಕ್ಷಗಳು ಸಮ್ಮಿಶ್ರ ಧರ್ಮ ಪಾಲಿಸಿ ವಿರೋಧ ಪಕ್ಷಗಳ ಟೀಕೆಗೆ ಗ್ರಾಸವಾಗುವುದನ್ನು ತಪ್ಪಿಸಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದ್ದಾರೆ.
ಇನ್ನು ಮುಂದೆ ಸರ್ಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತೆಯೂ ಮಾತುಕತೆ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರ ನಡೆದುಬಂದ ಹಾದಿ, ಮುಂದೆ ಇಡಲಿರುವ ಹೆಜ್ಜೆಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಪಡೆದ ರಾಹುಲ್ ಗಾಂಧಿ ಅವರು, ಸರ್ಕಾರ ಇದೇ ರೀತಿ ಮುನ್ನಡೆಸಿಕೊಂಡು ಹೋಗಲು ಎಲ್ಲ ರೀತಿಯ ಸಹಕಾರ ನೀಡುವ ಅಭಯ ನೀಡಿದ್ದಾರೆ.
ಉಭಯ ಪಕ್ಷಗಳ ಸರ್ಕಾರ ಎಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಆಗಾಗ್ಗೆ ತಲೆದೋರುವುದು ಸಹಜ. ಸಮನ್ವಯ ಸಮಿತಿ ಆಗಾಗ್ಗೆ ಸಭೆ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಜೊತೆಗೆ ರಾಜ್ಯದ ಉಭಯ ಪಕ್ಷಗಳ ನಾಯಕರು ಉದ್ಬವಿಸುವ ಅಡ್ಡಿ ಆತಂಕಗಳನ್ನು ಪರಸ್ಪರ ಸಮಾಲೋಚಿಸಿ ಬಗೆಹರಿಸಿಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ