ಹುಬ್ಬಳ್ಳಿ : ವಿಮಾನ ಖರೀದಿಯಲ್ಲಿ ೧ ಲಕ್ಷ ೩೦ ಸಾವಿರ ಕೋಟಿ ಹಗರಣ ನಡೆದಿದೆ ಎಂದು ಎಐಸಿಸಿ ಮಾಧ್ಯಮ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸುದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ರಕ್ಷಣಾ ಇಲಾಖೆಯಲ್ಲಿ ನಡೆದಿರುವ ದೊಡ್ಡ ಹಗರಣ ಇದಾಗಿದ್ದು, ವಿಮಾನ ಕೊಳ್ಳುವ ಬೆಲೆಯ ಮೂರು ಪಟ್ಟು ಹೆಚ್ಚಿಸಿ ೧ ಲಕ್ಷ ೩೦ ಸಾವಿರ ಕೋಟಿ ಹಣವನ್ನು ಖಾಸಗಿಯವರಿಗೆ ಹಸ್ತಾಂತರಿಸಿದೆ. ಅಷ್ಟೇ ಅಲ್ಲದೇ ರಫೇಲ್ ವಿಮಾನ ಖರೀದಿಯಲ್ಲೂ ಗೋಲಮಾಲ್ ನಡೆದಿದ್ದು, 526 ಕೋಟಿ ರೂಪಾಯಿಗಳಿಗೆ ಖರೀದಿಸುವ ಬದಲು 1670 ಕೋಟಿ ಹಣಕ್ಕೆ ಖರೀದಿಸಲಾಗಿದೆ. ೪೧ .೨೦೫ ಕೋಟಿಯಷ್ಟು ಸಾರ್ವಜನಿಕರ ತೆರಿಗೆ ಹಣ ನಷ್ಟವಾಗಿದೆ. ಯುಪಿಎ ಸರ್ಕಾರದ ಒಪ್ಪಂದ ಮುರಿದ, ಮೋದಿ ಸರ್ಕಾರ ಫ್ರಾನ್ಸ್ ನೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿತು. ಪ್ರಧಾನಿ ಹಾಗೂ ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ೩೬ ರಫೇಲ್ ವಿಮಾನಗಳ ಖರೀದಿ ಕುರಿತು ಬಾಯಿ ಬಿಡುತ್ತಿಲ್ಲ. ೪೧ ಸಾವಿರ ಕೋಟಿ ಹಣ ನೀಡಿ ಯುದ್ಧ ವಿಮಾನ ಖರೀದಿಸುವ ಅಗತ್ಯ ಏನಿತ್ತೆಂದು ಪ್ರಶ್ನಿಸಿದರು. ೧೨೬ ಯುದ್ಧ ವಿಮಾನಗಳ ಬದಲಾಗಿ ೩೬ ವಿಮಾನ ಖರೀದಿಸಿದ್ದು ದೇಶಕ್ಕೆ ರಕ್ಷಣೆ ನೀಡುತ್ತದೆ. ಪ್ರಧಾನಿ ಮೋದಿ ವಿಮಾನ ಖರೀದಿ ಕುರಿತು ಬೆಲೆಯ ಬಗ್ಗೆ ಪ್ರಧಾನಿ ಏಕೆ ಮೌನ ಮುರಿಯುತ್ತಿಲ್ಲ. ಅನುಭವಿ ಸಂಸ್ಥೆ ಬಿಟ್ಟು ಅನಾನುಭವಿ ಸಂಸ್ಥೆಗೆ ಗುತ್ತಿಗೆ ಕೊಟ್ಟಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು. ೭೦ ವರ್ಷಗಳ ಅನುಭವ ಇರುವ ಫ್ರಾನ್ಸ್ ಕಂಪನಿಗೆ ಏಕೆ ಗುತ್ತಿಗೆ ನೀಡಲಿಲ್ಲ. ಈ ಎಲ್ಲ ನಮ್ಮ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಉತ್ತರ ನೀಡಬೇಕು ಎಂದು ಸವಾಲು ಹಾಕಿದ ಚತುರ್ವೇದಿ, ಅಗತ್ಯವಾಗಿ ನಿರ್ವಹಿಸಬೇಕಾದ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಪ್ರಧಾನಿ ಮೋದಿಯವರ ಭ್ರಷ್ಟಾಚಾರ ಮುಕ್ತ ಭಾರತ ಎಲ್ಲಿದೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರದ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಭ್ರಷ್ಟಾಚಾರ ಮುಕ್ತ ಭಾರತ ಯಾವಾಗ ಆಗುತ್ತದೆ.
ರಾಷ್ಟ್ರೀಯ ರಕ್ಷಣೆಯಲ್ಲಿ ಯಾವುದೇ ರಾಜಿಯಾಗಲು ನಾವು ಸಿದ್ದರಿಲ್ಲ. ಯುಪಿಎ ಸರ್ಕಾರದಲ್ಲಿ ಯಾವುದೇ ರೀತಿಯಲ್ಲಿ ರಾಷ್ಟ್ರದ ರಕ್ಷಣೆಗೆ ರಾಜಿಯಾಗುತ್ತಿರಲಿಲ್ಲ, ಆದರೆ ಇಂದಿನ ಪ್ರಧಾನಿ ಸೂಟು ಬೂಟುಗಳ ಪ್ರಧಾನಿ. ನೋಟ್ ಬ್ಯಾನ್ ಮೂಲಕ ದೇಶದ ಆರ್ಥಿಕತೆ ಸಂಪೂರ್ಣ ನೆಲಕಚ್ಚಿತು. ಪ್ರಧಾನಿ ಹಾಗೂ ಸಂಸತ್ತಿನಲ್ಲಿ ಸುಳ್ಳು ಹೇಳುವ ರಕ್ಷಣಾ ಸಚಿವರಿಂದ ದೇಶಕ್ಕೆ ರಕ್ಷಣೆ ಸಿಗುವುದಿಲ್ಲ. ಕೇವಲ ೧೨ ದಿನಗಳಲ್ಲಿ ಅಸ್ತಿತ್ವಕ್ಕೆ ಬಂದ ಕಂಪನಿಗೆ ಗುತ್ತಿಗೆ ನೀಡಿದ್ದು ಎಷ್ಟು ಸರಿ ಎಂದರು. ತಿನ್ನಲು ಬಿಡುವುದಿಲ್ಲ ನಾನು ತಿನ್ನುವುದಿಲ್ಲ ಎಂದು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಕೆಟ್ಟ ಶಬ್ದಗಳನ್ನು ಹೇಳುವ ಸಂಸದರಿಗೆ ಬಿಜೆಪಿಯಲ್ಲಿ ಗೌರವ ಸಿಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಪ್ರಲ್ಹಾದ್ ಜೋಶಿ ಹಾಗೂ ಅನಂತಕುಮಾರ್ ಹೆಗಡೆಯವರಿಗೆ ಟಾಂಗ್ ನೀಡಿದರು. ಪ್ರಧಾನಿ ಮಂತ್ರಿಯಲ್ಲ ಮೋದಿ ಪ್ರಚಾರ ಮಂತ್ರಿ. ಪ್ರಚಾರಕ್ಕಾಗಿ ದೇಶದ ಜನರ ತೆರಿಗೆ ಹಣವನ್ನು ಮೋದಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದೊಡ್ಡ ದೊಡ್ಡ ಉದ್ದಿಮೆಗಾರರಿಗೆ ಇವರ ಶ್ರೀ ರಕ್ಷೆ ಇದೆ. ಪ್ರತಿ ಚುನಾವಣೆಗೆ ಅವರೇ ಹಣ ತೊಡಗಿಸುತ್ತಾರೆ ಎಂದರು. ಮತ್ತೆ ಸಿಎಂ ಆಗ್ತಿನಿ ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಅವರು, ನಾವು ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಬಿರುಕು ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದಾಗಿ ಇರುತ್ತೇವೆ. ಕರ್ನಾಟಕದ ಜನರ ಅಭಿವೃದ್ದಿಗಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ರಾಜ್ಯ ಸರ್ಕಾರ ಚೆನ್ನಾಗಿ ಆಡಳಿತ ನಡೆಸುತ್ತಿದೆ. ಸುಳ್ಳು ಹೇಳುವ ಪಡೆ ಮೋದಿ ಸರ್ಕಾರದಲ್ಲಿ ಕೂಡಿದೆ ಎಂದು ಕಿಡಿಕಾರಿದರು.