ಬೆಂಗಳೂರು, ಆ.30- ವೈಜ್ಞಾನಿಕ ತಳಹದಿಯ ಶಿಕ್ಷಣ ಪಡೆಯುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಬದಲಾವಣೆಗೆ ಸಮೀಪವಿರುವ ಶಿಕ್ಷಣ ನೀಡುವುದು ಕ್ಯೂಲ್ಯಾಬ್ನ ಉದ್ದೇಶ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕಿ ಫಿಲೋಮಿನಾ ಲೋಬೊ ತಿಳಿಸಿದರು.
ನಗರದ ಮಲ್ಲೇಶ್ವರಂನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಆರಂಭಿಸಲಾಗಿರುವ ವಿನ್ಯಾಸ ಅನುಭವ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವೈಜ್ಞಾನಿಕವಾಗಿ ತಂತ್ರಜ್ಞಾನ ಕ್ಷೇತ್ರವು ಸಾಕಷ್ಟು ಮುಂದುವರಿದಿದ್ದು, ನಾವು ಹಳೆಯ ಪದ್ಧತಿಯನ್ನೇ ಅವಲಂಬಿಸಿದ್ದೇವೆ. ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಆರಂಭಿಸಿರುವ ಡಿಸೈನ್ ಎಕ್ಸಿಪೀರಿಯನ್ಸ್ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಬೋಧನಾ ತರಬೇತಿ ನೀಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 25ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡುವ ಕೆಲಸ ಪ್ರಶಂಸನೀಯ ಎಂದರು.
ವಿದ್ಯಾರ್ಥಿಗಳ ಉನ್ನತ ಮಟ್ಟದ ಸಂಶೋಧನೆ ಮತ್ತು ಅಭಿವೃದ್ಧಿಗೆ ಅಗತ್ಯವಾದ ತರಬೇತಿ ಇದಾಗಿದ್ದು, ಈ ಕಾರ್ಯಾಗಾರದಲ್ಲಿ ವಿನ್ಯಾಸಕರು, ಸಾಫ್ಟ್ವೇರ್, ಐಟಿ, ಜಾಹೀರಾತು, ಫ್ಯಾಷನ್, ಆಟೊಮೊಬೈಲ್ ಮತ್ತು ಇತರೆ ಕಂಪೆನಿಗಳ ಉದ್ಯೋಗಗಳನ್ನು ಪಡೆಯಲು ಸಹಕಾರಿಯಾಗುವಂತೆ ತರಬೇತಿ ನೀಡಲಾಗುತ್ತಿದೆ. ಇದು ಉದ್ಯೋಗ ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಇದಲ್ಲದೆ, ಸೃಜನಾತ್ಮಕ ಕ್ಷೇತ್ರವಾದ ಆರ್ಕಿಟಕ್ಚರ್ ಹಾಗೂ ವಿನ್ಯಾಸ ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ಮುಂದುವರಿಯಲು ಸಲಹೆ ನೀಡಲಾಗುತ್ತದೆ ಎಂದು ವಿವರಿಸಿದರು.